ಮೊಬೈಲ್‌ಗಳಿಂದ ಹೊರಬನ್ನಿ: ವಿದ್ಯಾರ್ಥಿಗಳಿಗೆ ಡಾ.ಮಂಜುನಾಥ್ ಕರೆ

ಟ್ಯಾಲೆಂಟ್ ದಶಮಾನೋತ್ಸವ ಪ್ರಯುಕ್ತ ‘ರಿಯಲ್ ಹೀರೋಗಳೊಂದಿಗೆ ಒಂದು ದಿನ’ ಕಾರ್ಯಕ್ರಮ
ಮಂಗಳೂರು: ನಗರದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ‘ಸೇವಾ ಉತ್ಸವ-2016’ ಅಂಗವಾಗಿ ಇಂದು ಬೆಳಗ್ಗೆ ‘ರಿಯಲ್ ಹೀರೋಗಳೊಂದಿಗೆ ಒಂದು ದಿನ’ ಎಂಬ ಕಾರ್ಯಕ್ರಮ ನಗರದ ಪುರಭವನದಲ್ಲಿ ಆರಂಭಗೊಂಡಿದೆ. ಇದರಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋಲಾಜಿ ಇದರ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಪ್ರಸ್ತುತ ವಿದ್ಯಾರ್ಥಿಗಳ ಸಾಧನೆಗೆ ಮೊಬೈಲ್ ಪೋನ್ ಅಡ್ಡಿಯಾಗಿದೆ. ಸಂಪರ್ಕಕ್ಕೆ ಅತ್ಯುತ್ತಮವಾಗಿರುವ ಮೊಬೈಲ್ ಪೋನ್‌ಗಳು ಇಂದು ಮಕ್ಕಳಲ್ಲಿ ಚಟವಾಗಿ ಆಗಿ ಬಳಕೆಯಾಗುತ್ತಿದ್ದು ದುಷ್ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಹತ್ತನೆ ತರಗತಿಯವರೆಗೆ ಆದರೂ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧವೇರಬೇಕು ಎಂದರು.
ಫಾಸ್ಟ್ ಫುಡ್ ಬಳಕೆಯ ಬಗ್ಗೆ ಎಚ್ಚರಿಸಿದ ಡಾ.ಮಂಜುನಾಥ್, ಫಾಸ್ಟ್‌ಟ್ ಫುಡ್‌ಗಳು ನಿಮ್ಮ ಜೀವನವನ್ನು ಫಾಸ್ಟಾಗಿ ಮುಗಿಸುತ್ತದೆ ಎಂದರು.
ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ, ನಿರೀಕ್ಷಿತ ಗುರಿ ಸಾಧನೆಯನ್ನು ಸಾಧಿಸಲು ನಿರಂತರ ಪ್ರಯತ್ನಿಸಿದರೆ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ದೇಶದಲ್ಲಿ ಹಲವು ಅಪರೂಪದ ಸಾಧಕರಿದ್ದು, ಅವರ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ನಾವು ಪ್ರಯತ್ನಿಸಬೇಕು. ನಿಜವಾದ ಹೀರೊಗಳ ಸಾಧನೆ ಹೆಚ್ಚಿನವರಿಗೆ ತಿಳಿಯದಾಗಿದ್ದು, ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಸೈನಿಕರು, ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಪಡೆದ ಮಾಲತಿ ಹೊಳ್ಳ ಪ್ರಭು ನಿಜವಾದ ಹೀರೋಗಳು, ನಾನಲ್ಲ ಎಂದು ಕಿವಿಮಾತು ಹೇಳಿದರು.
ವಿಶ್ವದ ಅತ್ಯಂತ ಕಿರಿಯ ಪ್ರಾಂಶುಪಾಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಶ್ಚಿಮ ಬಂಗಾಲದ ಮುರ್ಶೀದಾಬಾದ್‌ನ ಬಾಬರ್ ಅಲಿ, ದೇಶಕ್ಕೆ 80ನೆ ರ್ಯಾಂಕ್‌ನೊಂದಿಗೆ ಆಯ್ಕೆಯಾಗಿ ಈಗ ಐಎಎಸ್ ಅಧಿಕಾರಿಯಾಗಿರುವ ಹೈದರಾಬಾದ್‌ನ ಮುಶರ್ರಫ್ ಅಲಿ ಫಾರೂಕಿ, ಬ್ಯಾರೀಸ್ ಗ್ರೂಪ್ ಸಿಎಂಡಿ ಸೈಯದ್ ಮುಹಮ್ಮದ್ ಬ್ಯಾರಿ, ಬೆಂಗಳೂರಿನ ಹೋಮ್ ಆಫ್ ಹೋಪ್ ಇದರ ಅಧ್ಯಕ್ಷ ಟಿ.ರಾಜಾ(ಆಟೊ ರಾಜಾ), ಐಐಎಸ್ಸಿ ವಿಜ್ಞಾನಿ ಶಿವಕುಮಾರ್‌ರಂತಹ ವಿಶೇಷ ಸಾಧಕರು ಭಾಗವಹಿಸಿದ್ದಾರೆ.
ಅಶ್ರಫ್ ಜಿ. ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಡಾ ಕಮಿಷನರ್ ಮುಹಮ್ಮದ್ ನಝೀರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಡೈರೆಕ್ಟರೇಟ್ ಆಫ್ ಮೈನಾರಿಟೀಸ್‌ನ ಸಬೀರ್ ಅಹ್ಮದ್ ಮುಲ್ಲಾ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಸಂಶುದ್ದೀನ್ ಖಾಸಿಮ್, ಕೆ.ಎಚ್.ಕೆ.ಕರೀಮ್ ಉಪಸ್ಥಿತರಿದ್ದರು













