ಟಿಆರ್‌ಎಫ್ ಸೇವಾ ಉತ್ಸವ ಸಮಾರೋಪ, ಸಾಧಕರಿಗೆ ಸನ್ಮಾನ

ಮಂಗಳೂರು, ಜ.17: ಟ್ಯಾಲೆಂಟ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಲಾದ ಸೇವಾ ಉತ್ಸವ 2016 ರ ಸಮಾರೋಪ ಕಾರ್ಯಕ್ರಮ ವನ್ನು ಇಂದು ನಗರದ ಪುರಭವನದಲ್ಲಿ ಶಾಸಕ ಜೆ. ಆರ್. ಲೋಬೋ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು.ಪ್ರತಿಭೆಗಳನ್ನು ಗುರುತಿಸುವುದು ಸಮಾಜಸೇವೆಯ ಒಂದು ಭಾಗ. ಪ್ರತಿಭಾವಂತರು ಸಮಾಜಕ್ಕೆ ಸಿಗುವಂತೆ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸಮಾಜದಲ್ಲಿ ಈಗ ನೆಲೆಸಿರುವ ಬಂಡಾಯ ಭಾವನೆಯ ಬದಲಿಗೆ ಶಿಸ್ತುಬದ್ದವಾದ ಸಮಾಜ ಸೃಷ್ಟಿಯಾಗಬೇಕು.ಕ್ರಿಮಿನಲ್ ಸಮಾಜ ಬದಲಾಗಿ ಸಮಾಜದ ಬಗ್ಗೆ ಸದಭಿಪ್ರಾಯ ಮೂಡುವಂತಾಗಬೇಕು. ಪ್ರಸಕ್ತ ಹಲವು ಸಂಘಸಂಸ್ಥೆಗಳು ಸವಲತ್ತುಗಳನ್ನು ನೀಡುವ ಮೂಲಕ ಬಿಕ್ಷುಕ ಸಮಾಜವನ್ನು ಸೃಷ್ಟಿಸುತ್ತಿದೆ. ಸಂಘಟನೆಗಳು ಸಮಾಜಕ್ಕೆ ಸವಲತ್ತು ನೀಡುವ ಬದಲು ಜೀವನವೌಲ್ಯವನ್ನು , ಬದುಕುವ ದಾರಿಯನ್ನು ಕಲಿಸಿಕೊಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಯ್ಯದ್ ಅಲ್‌ಹದಿ ಇಬ್ರಾಹೀಂ ತಂಙಳ್ ಅತೂರ್ ದುಅ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್ , ಇನ್‌ಲ್ಯಾಂಡ್ ಬಿಲ್ಡರ್ ಎಂಡಿ ಸಿರಾಜ್ ಅಹ್ಮದ್, ನಿವೃತ್ತ ಬೆಂಗಳೂರು ಡಿಸಿಪಿ ಜಿ.ಎ.ಬಾವ, ಮನಪಾ ಸದಸ್ಯ ಅಜೀಝ್ ಕುದ್ರೋಳಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ವೈಸ್ ಚೇರ್‌ಮೆನ್ ಅಶ್ರಫ್ ಜಿ.ಬಾವ, ಉದ್ಯಮಿ ಶರೀಫ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಟ್ಯಾಲೆಂಟ್ ನ್ಯಾಷನಲ್ ಐಕಾನ್ 2016 ಪ್ರಶಸ್ತಿ:
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಟ್ಯಾಲೆಂಟ್ ನ್ಯಾಷನಲ್ ಐಕಾನ್ 2016 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯೆನಪೋಯ ವಿಶ್ವವಿದ್ಯಾನಿಲಯದ ಕುಲಪತಿ ಅಲ್‌ಹಜ್ ವೈ. ಅಬ್ದುಲ್ಲ ಕುಂಞ, ಇಲ್ಮಿ ಅಝಾಜಿಯ ಕದನ್ ಚೆನ್ನೈ ಇದರ ಸ್ಥಾಪಕ ವೌಲನ ಶಂಸುದ್ದೀನ್ ಖಾಸಿಮಿ, ವಿಶ್ವದ ಅತಿ ಕಿರಿಯ ಪ್ರಾಂಶುಪಾಲ ಎಂಬ ಹೆಗ್ಗಳಿಗೆ ಪಾತ್ರವಾಗಿರುವ ಬಾಬರ್ ಅಲಿ ಪಶ್ಚಿಮ ಬಂಗಾಲ, 2013 ಯು ಪಿ ಎಸ್ ಸಿ ಯಲ್ಲಿ 80 ನೇ ರ್ಯಾಂಕ್ ಪಡೆದ ಮೊಹಮ್ಮದ್ ಮುಶರಪ್ ಅಲಿ ಫಾರುಖಿ, ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಯ ಡಾ. ಸಿ.ಎನ್. ಮಂಜುನಾಥ್ ಕ್ರಿಕೆಟರ್ ಸೈಯ್ಯದ್ ಕಿರ್ಮಾನಿ, ಹೋಮ್ ಅಫ್ ಹೋಫ್ ಚೇರ್‌ಮೆನ್ ಟಿ.ರಾಜ(ಅಟೋ ರಾಜ), ಹೆಚ್ ಕೆ ಹೆಚ್ ಆ್ಯಂಡ್ ಎ.ಕೆ ಗ್ರೂಪ್ ಮಾಲಕ ಕೆ. ಅಬ್ದುಲ್ ಕರೀಂ ಶಿರ್ಸಿ ಮತ್ತು ನವದೆಹಲಿಯ ರೆಹಾಬ್ ಇಂಡಿಯಾ ಫೌಂಡೇಶನ್ ಸಂಸ್ಥೆಗೆ ನೀಡಿ ಗೌರವಿಸಲಾಯಿತು.
















