ಇರಾನ್ ಪರಮಾಣು ಒಪ್ಪಂದ ಅನುಷ್ಠಾನ ಮೈಲಿಗಲ್ಲು: ಬಾನ್ ಕಿ ಮೂನ್

ವಿಶ್ವಸಂಸ್ಥೆ, ಜ. 17: ವಿಶ್ವದ ಶಕ್ತ ರಾಷ್ಟ್ರಗಳು ಮತ್ತು ಇರಾನ್ ನಡುವೆ ಆಗಿರುವ ಪರಮಾಣು ಒಪ್ಪಂದ ಜಾರಿಗೆ ಬಂದಿರುವುದನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಸ್ವಾಗತಿಸಿದ್ದಾರೆ ಹಾಗೂ ಈ ಬೆಳವಣಿಗೆ ಪ್ರಾದೇಶಿಕ ಸ್ಥಿರತೆಗೆ ದೇಣಿಗೆ ನೀಡುವುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
‘‘ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲು. ಸಂಬಂಧಪಟ್ಟ ಎಲ್ಲ ಪಕ್ಷಗಳು ತಾವು ಒಪ್ಪಿಕೊಂಡಿರುವ ಬದ್ಧತೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ಇದು ತೋರಿಸುತ್ತದೆ’’ ಎಂದು ಹೇಳಿಕೆಯೊಂದರಲ್ಲಿ ಬಾನ್ ತಿಳಿಸಿದರು.
ಐತಿಹಾಸಿಕ ಒಪ್ಪಂದದಲ್ಲಿ ನಿಗದಿಪಡಿಸಲಾಗಿರುವ ತನ್ನ ಪಾಲಿನ ಬದ್ಧತೆಗಳನ್ನು ಇರಾನ್ ಈಡೇರಿಸಿದೆ ಎಂಬುದಾಗಿ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಈ ಮೊದಲು ಪ್ರಮಾಣಪತ್ರ ನೀಡಿತ್ತು. ಇದು ಇರಾನ್ ವಿರುದ್ಧದ ದಿಗ್ಬಂಧನಗಳು ತೆರವುಗೊಳ್ಳಲು ವೇದಿಕೆ ಸಿದ್ಧಪಡಿಸಿತ್ತು.
‘‘ಈ ಒಪ್ಪಂದದ ಯಶಸ್ಸು ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಸಂಬಂಧಿಸಿ ಹೆಚ್ಚಿನ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಹಕಾರಕ್ಕೆ ಕಾರಣವಾಗುತ್ತದೆ’’ ಎಂಬ ಆಶಯವನ್ನು ಮೂನ್ ವ್ಯಕ್ತಪಡಿಸಿದರು.
ಅದೇ ವೇಳೆ, ‘ವಾಶಿಂಗ್ಟನ್ ಪೋಸ್ಟ್’ ಪತ್ರಕರ್ತ ಜಾಸನ್ ರಿಝಯಾನ್ ಸೇರಿದಂತೆ ಐವರು ಅಮೆರಿಕನ್ನರ ಬಿಡುಗಡೆಯನ್ನೂ ವಿಶ್ವಸಂಸ್ಥೆಯ ಮುಖ್ಯಸ್ಥರು ಸ್ವಾಗತಿಸಿದರು.
‘‘ಇರಾನ್ ಮೇಲಿನ ದಿಗ್ಬಂಧನ ತೆರವುಗೊಂಡಿರುವುದರಿಂದ ನಾನು ಖುಷಿಯಾಗಿದ್ದೇನೆ’’ ಎಂದು ಅವರು ನುಡಿದರು.
ದಿಗ್ಬಂಧನ ತೆರವು: ಇರಾನ್ ಅಧ್ಯಕ್ಷ ಹರ್ಷ
ಟೆಹರಾನ್, ಜ. 17: ತನ್ನ ದೇಶದ ವಿರುದ್ಧದ ಅಂತಾರಾಷ್ಟ್ರೀಯ ದಿಗ್ಬಂಧನೆ ತೆರವುಗೊಂಡಿರುವುದಕ್ಕೆ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಇಂದು ಸಂತಸ ವ್ಯಕ್ತಪಡಿಸಿದ್ದಾರೆ.
‘‘ನಾವು ಜಗತ್ತಿನತ್ತ ಸ್ನೇಹದ ಹಸ್ತವನ್ನು ಚಾಚಿದ್ದೇವೆ ಹಾಗೂ ಶತ್ರುತ್ವ, ಸಂಶಯ ಮತ್ತು ಅಪನಂಬಿಕೆಗಳನ್ನು ಹಿಂದಕ್ಕೆ ಬಿಟ್ಟು ಬಂದಿದ್ದೇವೆ. ಇದರೊಂದಿಗೆ ಜಗತ್ತಿನೊಂದಿಗೆ ಇರಾನ್‌ನ ಹೊಸ ಬಾಂಧವ್ಯವನ್ನು ಅನಾವರಣಗೊಳಿಸಿದ್ದೇವೆ’’ ಎಂದು ರೂಹಾನಿ ಹೇಳಿರುವುದಾಗಿ ಅಧಿಕೃತ ಸುದ್ದಿ ಸಂಸ್ಥೆ ಇರ್ನಾ ವರದಿ ಮಾಡಿದೆ.
ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗೆ ಜುಲೈ ತಿಂಗಳಲ್ಲಿ ನಡೆದ ಪರಮಾಣು ಒಪ್ಪಂದವನ್ನು ಇರಾನ್ ಜಾರಿಗೆ ತರುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಐಎಇಎ ಶನಿವಾರ ಖಚಿತ ಪಡಿಸಿದ ಬಳಿಕ ಇರಾನ್‌ನ ಸುದೀರ್ಘ ಕಾಲದ ಪ್ರತ್ಯೇಕತೆ ಮುಕ್ತಾಯಕ್ಕೆ ಬಂತು.
‘‘ ‘ಜಂಟಿ ಸಮಗ್ರ ಕಾರ್ಯ ಯೋಜನೆ (ಜೆಸಿಪಿಒಎ)’ಯ ಅನುಷ್ಠಾನ ಯಾವುದೇ ದೇಶಕ್ಕೆ ನಷ್ಟವಲ್ಲ’’ ಎಂದು ರೂಹಾನಿ ಅಭಿಪ್ರಾಯಪಟ್ಟರು. ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ಜರ್ಮನಿ ಮತ್ತು ರಶ್ಯಗಳೊಂದಿಗೆ ಇರಾನ್ ಸಹಿ ಹಾಕಿದ ಪರಮಾಣು ಒಪ್ಪಂದವನ್ನು ಅಧಿಕೃತವಾಗಿ ಜೆಸಿಪಿಒಎ ಎಂಬುದಾಗಿ ಕರೆಯಲಾಗುತ್ತಿದೆ.
‘‘ಇರಾನ್‌ನ ಸ್ನೇಹಿತರು ಖುಷಿಯಾಗಿದ್ದಾರೆ ಹಾಗೂ ಅದರ ಪ್ರತಿಸ್ಪರ್ಧಿಗಳು ಚಿಂತೆ ಮಾಡಬೇಕಾಗಿಲ್ಲ. ನಾವು ಯಾವುದೇ ಸರಕಾರ ಅಥವಾ ದೇಶಕ್ಕೆ ಬೆದರಿಕೆಯಲ್ಲ’’ ಎಂದು ಇರಾನ್ ಅಧ್ಯಕ್ಷರು ಹೇಳಿದರು.







