ರಾಜಸ್ಥಾನ: ಎನ್‌ಜಿಒ ಕಾರ್ಯಕರ್ತರ ಮೇಲೆ ದಾಳಿ; 12 ಮಂದಿಗೆ ಗಾಯ
ಜೈಪುರ,ಜ.17: ಜಲಾವರ್ ನಗರದಲ್ಲಿ ಖ್ಯಾತ ಸಾಮಾಜಿಕ ಹೋರಾಟಗಾರರಾದ ಅರುಣಾ ರಾಯ್ ಹಾಗೂ ನಿಖಿಲ್ ದೇಯ್ ನೇತೃತ್ವದ ಮಾನವಹಕ್ಕುಗಳ ಸಂಘಟನೆಯ ಕಾರ್ಯಕರ್ತರ ಮೇಲೆ ನಡೆದ ದಾಳಿಗೆ ಸಂಬಂಧಿಸಿ,ರಾಜಸ್ಥಾನ ಪೊಲೀಸರು ಅಜ್ಞಾತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಕನ್ವರ್ ಲಾಲ್ ಮೀನಾ ಶಾಮೀಲಾಗಿರುವುದಾಗಿ, ಅರುಣಾರಾಯ್ ಹಾಗೂ ನಿಖಿಲ್ ದೇಯ್ ಆರೋಪಿಸಿದ್ದಾರೆ.
ಜಲಾವರ್‌ನಲ್ಲಿ, ಶನವಾರ ಸರಕಾರದ ಸಾಮಾಜಿಕ ಯೋಜನೆಗಳ ಕುರಿತಾದ ದೂರುಗಳಿಗೆ ಸಂಬಂಧಿಸಿ ಜನಜಾಗೃತಿ ಅಭಿಯಾನ ನಡೆಸುತ್ತಿದ್ದ ಸೂಚನಾ ‘ಎವಂ ರೋಝ್‌ಗಾರ್ ಮಂಚ್’ ಸಂಘಟನೆಯ ಕಾರ್ಯಕರ್ತರ ಮೇಲೆ, ಶಾಸಕ ಕನ್ವರ್‌ಲಾಲ್ ಮೀನಾ ನೇತೃತ್ವದ 40ಕ್ಕೂ ಅಧಿಕ ಮಂದಿಯ ಗುಂಪೊಂದು ಹಲ್ಲೆ ನಡೆಸಿತ್ತು. ಈ ಘಟನೆಯಲ್ಲಿ ಸಂಘಟನೆಯ 12 ಮಂದಿ ಕಾರ್ಯಕರ್ತರು ಗಾಯಗೊಂಡಿದ್ದರು. ದಾಳಿ ನಡೆಸಿದ ದುಷ್ಕರ್ಮಿಗಳು, ವಾಹನಗಳನ್ನೂ ಜಖಂಗೊಳಿಸಿದ್ದರು.ದುಷ್ಕರ್ಮಿಗಳು ಮಹಿಳೆಯರಿಗೂ ಥಳಿಸಿದ್ದು,ಕ್ಯಾಮರಾವೊಂದನ್ನು ಅಪಹರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಕಾರ್ಯಕರ್ತರ ಸ್ಥಿತಿ ಗಂಭೀರವಾಗಿದೆಯೆಂದು ತಿಳಿದುಬಂದಿದೆ.
ಇದೊಂದು ಪೂರ್ವಯೋಜಿತ ಸಂಚೆಂದು ನಿಖಿಲ್ ದೇಯ್ ಆಪಾದಿಸಿದ್ದಾರೆ. ತಮ್ಮ ಸಂಘಟನೆ ಆಯೋಜಿಸಿರುವ ಜವಾಬ್‌ದೇಹಿ ಯಾತ್ರೆಯು ರಾಜ್ಯದ 15 ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸಭೆಗಳನ್ನು ನಡೆಸಿದ್ದು, ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆ ದೊರೆತಿದೆ ಎಂದವರು ಹೇಳಿದ್ದಾರೆ.ಈ ಅಭಿಯಾನದಿಂದ ಪ್ರೇರಿತರಾಗಿ ಸರಕಾರದ ಸಾಮಾಜಿಕ ಯೋಜನೆಗಳ ಪ್ರಯೋಜನಗಳು ತಮಗೆ ದೊರಕದೇ ಇರುವ ಬಗ್ಗೆ ಜನರು 6 ಸಾವಿರಕ್ಕೂ ಅಧಿಕ ದೂರುಗಳನ್ನು ದಾಖಲಿಸಿದ್ದಾರೆಂದು ಹೇಳಿದ್ದಾರೆ.





