ಪಕ್ಷ ನಾಯಕರೊಂದಿಗೆ ಮೆಹಬೂಬ ಸಭೆ ಸರಕಾರ ರಚನೆಯ ನಿರೀಕ್ಷೆ ಜೀವಂತ
ಶ್ರೀನಗರ, ಜ.17: ತಂದೆ ಮುಫ್ತಿ ಮುಹಮ್ಮದ್ ಸಯೀದ್‌ರ ನಿಧನದ 10 ದಿನಗಳ ಬಳಿಕ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ತನ್ನ ಪಕ್ಷೀಯರೊಂದಿಗೆ ಸಭೆ ನಡೆಸುತ್ತಿದ್ದಾರೆ. ಇದು ರಾಜ್ಯದಲ್ಲಿ ಸರಕಾರ ರಚನೆಯ ಕುರಿತಾದ ಅನಿಶ್ಚಿತತೆಯನ್ನು ನಿವಾರಿಸುವ ಮೊದಲ ಹೆಜ್ಜೆಯಂದು ನಿರೀಕ್ಷಿಸಲಾಗಿದೆ.
ಇಂದು ಅಪರಾಹ್ನ ಸಭೆ ಆರಂಭಕ್ಕೆ ಮೊದಲು ಪಿಡಿಪಿ ನಾಯಕ ಅಲ್ತಾಫ್ ಬುಖಾರಿ, ಇದು ಮುಫ್ತಿ ಸಾಹೇಬರು ಇಲ್ಲದೆ ನಡೆಯುವ ತಮ್ಮ ಮೊದಲ ಸಭೆಯಾಗಿದೆ. ವಾತಾವರಣ ಹೇಗಿರಬಹುದೆಂದು ತನಗೆ ತಿಳಿಯದು ಎಂದಿದ್ದರು.
ಸಭೆಯಲ್ಲಿ ಮುಫ್ತಿ ಮುಹಮ್ಮದ್ ಸಯೀದ್‌ರ ಸರಕಾರದಲ್ಲಿದ್ದ ಎಲ್ಲ ಸಚಿವರು, ಪಕ್ಷದ ಸಂಸದರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಸರಕಾರ ರಚನೆಯು ಶೀಘ್ರವೇ ಆಗಬೇಕೆಂದು ಹೆಚ್ಚಿನ ಮಾಜಿ ಸಚಿವರು ಬಯಸಿದ್ದಾರೆಂದು ಮೂಲಗಳು ತಿಳಿಸಿವೆ.
ಜ7ರಂದು ಸಯೀದ್‌ರ ನಿಧನಾನಂತರ ಜಮ್ಮು-ಕಾಶ್ಮೀರ ರಾಷ್ಟ್ರಪತಿ ಆಡಳಿತದಲ್ಲಿದೆ. ಹಂಗಾಮಿ ಮುಖ್ಯಮಂತ್ರಿಗೆ ರಾಜ್ಯದ ಸಂವಿಧಾನದಲ್ಲಿ ಅವಕಾಶವಿಲ್ಲ. ತನ್ನ ತಂದೆಯ ಉತ್ತರಾಧಿಕಾರಿಣಿಯಾಗುವರೆಂದು ನಿರೀಕ್ಷಿಸಲಾಗಿದ್ದ ಮೆಹಬೂಬ, ಸಯೀದ್‌ರ ಮರಣದ ಮರುದಿನವೇ ಪ್ರತಿಜ್ಞೆ ಸ್ವೀಕರಿಸುವ ಒಲವು ಹೊಂದಲಿಲ್ಲ.
ರಾಜ್ಯಕ್ಕೆ ಆರ್ಥಿಕ ಪ್ಯಾಕೇಜ್ ಹಾಗೂ ನೆರೆ ಪರಿಹಾರ ಒದಗಿಸುವಲ್ಲಿ ಕೇಂದ್ರ ಸರಕಾರದ ನಿಧಾನ ಧೋರಣೆಯಿಂದಾಗಿ ಅವರು, ಮಿತ್ರ ಪಕ್ಷ ಬಿಜೆಪಿಯ ಮೇಲೆ ಅಸಮಾಧಾನಗೊಂಡಿದ್ದಾರೆಂಬ ವರದಿಗಳ ಬಳಿಕ, ರಾಜಕೀಯ ಅಸ್ಥಿರತೆ ಹೆಚ್ಚಾಗಿತ್ತು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮೆಹಬೂಬರನ್ನು ಭೇಟಿಯಾದ ಬಳಿಕ ಹಾಗೂ ಬಿಜೆಪಿಯಿಂದ ಮೈತ್ರಿಯ ಕೊಡುಗೆ ಬಂದಲ್ಲಿ ಆ ಕುರಿತು ಚರ್ಚಿಸುವೆನೆಂದು ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ ಬಳಿಕ ರಾಜಕೀಯ ಮರು ಹೊಂದಾಣಿಕೆ ಸಂಭವಿಸುವ ಬಗ್ಗೆ ನಿರೀಕ್ಷೆ ಉಂಟಾಯಿತು.
87 ಸದಸ್ಯ ಬಲದ ಜಮ್ಮು-ಕಾಶ್ಮೀರ ವಿಧಾನ ಸಭೆಯಲ್ಲಿ ಬಿಜೆಪಿ 25, ಎನ್‌ಸಿ 15 ಹಾಗೂ ಪಿಡಿಪಿ 28 ಶಾಸಕರನ್ನು ಹೊಂದಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬರೇ ಪಿಡಿಪಿಯ ಸರ್ವಾನುಮತಿಯ ಆಯ್ಕೆಯಾಗಿದ್ದಾರೆ. ಬಿಜೆಪಿಯೂ ಇದುವರೆಗೆ ಅವರ ಅಭ್ಯರ್ಥಿತ್ವವನ್ನು ವಿರೋಧಿಸಿಲ್ಲ.
ತನ್ನ ತಂದೆ ಸಯೀದ್‌ರ ಅತಿದೊಡ್ಡ ನಿರ್ಧಾರವೊಂದನ್ನು ಬದಲಿಸಲು ಮೆಹಬೂಬ ಬಯಸಲಾರರಾದ ಕಾರಣ ಬಿಜೆಪಿ-ಪಿಡಿಪಿ ಮೈತ್ರಿ ಮುಂದುವರಿಯಬಹುದು. ಆದಾಗ್ಯೂ, ತಕ್ಷಣವಲ್ಲದಿದ್ದರೂ, ಮುಂದೆ ಅವರು ಶರ್ತಗಳನ್ನು ಮರುರೂಪಿಸಬಹುದು ಎಂದು ಮೂಲಗಳು ಅಭಿಪ್ರಾಯಿಸಿವೆ.





