ದೇವಸ್: ಕೋಮುಗಲಭೆ; ಕರ್ಫ್ಯೂ, 50 ಮಂದಿಯ ಬಂಧನ
ದೇವಸ್(ಮ.ಪ್ರ.),ಜ.17: ಎರಡು ಸಮುದಾಯಗಳ ಸದಸ್ಯರ ಘರ್ಷಣೆ ನಡೆದ ಹಿನ್ನೆಲೆಯಲ್ಲಿ, ನಗರದ ಎರಡು ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು 50 ಮಂದಿಯನ್ನು ಬಂಧಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ದೇವಸ್ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಒಂದು ಕೋಮಿನ ವ್ಯಕ್ತಿಯ ಮೇಲೆ ಇನ್ನೊಂದು ಕೋಮಿಗೆ ಸೇರಿದ ಮೂವರು ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಬೆನ್ನಲ್ಲೇ ಘರ್ಷಣೆ ಭುಗಿಲೆದ್ದಿತು. ದಾಳಿಯಲ್ಲಿ ಗಂಭೀರ ಗಾಯಗೊಂಡ 25 ವರ್ಷದ ಎಂಬಿಎ ವಿದ್ಯಾರ್ಥಿಯೊಬ್ಬ ಇಂದೋರ್‌ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಘಟನೆಯಿಂದಾಗಿ ಮಾರುಕಟ್ಟೆ ಪ್ರದೇಶದಲ್ಲಿ ಜನರು ಭಯಭೀತರಾಗಿ ಓಡತೊಡಗಿದಾಗ ಕಾಲ್ತುಳಿತವೂ ಸಂಭವಿಸಿತು. ಆ ಬಳಿಕ ಎರಡೂ ಸಮುದಾಯಗಳಿಗೆ ಸೇರಿದವರು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದ್ದರು. ಘಟನೆಯ ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ, ಅಪಾರ ಸಂಖ್ಯೆಯ ಮಾರಾಕಾಯುಧಗಳು ಹಾಗೂ ಪೆಟ್ರೋಲ್ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ 50ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದರು.
ನಗರದಲ್ಲಿ ರವಿವಾರವೂ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಕಾರ್ಲಿ-ಬಾವ್ಡಿ ಹಾಗೂ ಮಾಲ್ಲಿ-ಮೊಹಲ್ಲಾ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ ಹಾಗೂ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.





