ಜ.31ರೊಳಗೆ ಸಣ್ಣ ತೆರಿಗೆ ಪಾವತಿದಾರರಿಗೆ ಒಟ್ಟು 1,148 ಕೋಟಿ ರೂ. ಮರುಪಾವತಿ
ಹೊಸದಿಲ್ಲಿ,ಜ.17: ಈ ತಿಂಗಳ ಅಂತ್ಯದೊಳಗೆ ಆದಾಯ ತೆರಿಗೆ ಇಲಾಖೆಯು, ಸಣ್ಣ ತೆರಿಗೆ ಪಾವತಿದಾರರಿಗೆ ಬಾಕಿಯಿರುವ ಒಟ್ಟು ಸುಮಾರು 1,148 ಕೋಟಿ ರೂ. ಮೊತ್ತದ, 64 ಸಾವಿರಕ್ಕೂ ಹೆಚ್ಚು ಮರುಪಾವತಿಗಳನ್ನು ಮಾಡಲಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ತೆರಿಗೆಪಾವತಿದಾರರಿಗೆ ಬಾಕಿಯಿರುವ ಹಣವನ್ನು ಕೂಡಲೇ ಮರುಪಾವತಿಸುವಂತೆ ಸೂಚಿಸಿ, ಕೇಂದ್ರ ಸರಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇತ್ಯರ್ಥವಾಗದೆ ಉಳಿದಿರುವ 64,938 ತೆರಿಗೆ ಪ್ರಕರಣಗಳಲ್ಲಿ 1,148.14 ಕೋಟಿ ರೂ.ಮೊತ್ತದ, ಬಾಕಿ ಹಣವನ್ನು ಜನವರಿ 31ರೊಳಗೆ, ಮರುಪಾವತಿಸುವಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ.
2013-14 ಹಾಗೂ 2014-15ನೆ ಅಸೆಸ್‌ಮೆಂಟ್ ವರ್ಷಗಳಿಗೆ ಸೇರಿದ, 5 ಸಾವಿರಕ್ಕಿಂತ ಕಡಿಮೆ ಮೊತ್ತದ ಪ್ರಕರಣಗಳಿಗೆ ಸಂಬಂಧಿಸಿ ಇಂತಹ ಮರುಪಾವತಿಗಳನು ಮಾಡಲಾಗುವುದೆಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯ ಅಧ್ಯಕ್ಷ ಎ.ಕೆ. ಜೈನ್, ಇತ್ತೀಚೆಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ನಿರ್ದೇಶನವನ್ನು ನೀಡಿದ್ದಾರೆ. ಜನವರಿ 31ರೊಳಗೆ ಈ ಸಣ್ಣ ಮೊತ್ತದ ಮರುಪಾವತಿಗಳನ್ನು ಮಾಡುವಂತೆ ಮಂಡಳಿಯು ಸಭೆಯಲ್ಲಿ ಆದೇಶಿಸಿರುವುದಾಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮರುಪಾವತಿಯ ಸ್ಥಿತಿಗತಿಯನ್ನು, ಅಂತಿಮಗಡುವಿನ ವಿಸ್ತರಣೆ ಸೇರಿದಂತೆ ಇಡೀ ಪ್ರಕ್ರಿಯೆಯ ಬಗ್ಗೆ ಸಿಬಿಡಿಟಿ ಮುಂದಿನ ಕೆಲವು ದಿನಗಳಲ್ಲಿ ಪರಾಮರ್ಷೆೆ ನಡೆಸಲಿದೆ. ಈ ಶ್ರೇಣಿಯಲ್ಲಿ ಬರುವ ಯಾವುದೇ ಮರುಪಾವತಿಯನ್ನು ಬಾಕಿಯುಳಿಸಿದಲ್ಲಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಇಲಾಖೆಯ ಹೇಳಿಕೆ ತಿಳಿಸಿದೆ.





