ಸಮಾನ ಹುದ್ದೆ-ಸಮಾನ ಪಿಂಚಣಿ ವಿವಾದ ಜೇಟ್ಲಿ ನಿವಾಸದ ಹೊರಗೆ ಮಾಜಿ ಸೈನಿಕರ ಪ್ರತಿಭಟನೆ
ಹೊಸದಿಲ್ಲಿ, ಜ.17: ಸರಕಾರದ ಸಮಾನ ಹುದ್ದೆ, ಸಮಾನ ಪಿಂಚಣಿ (ಒಆರ್‌ಒಪಿ) ಯೋಜನೆಯಲ್ಲಿ ಬದಲಾವಣೆಗಳಿಗೆ ಆಗ್ರಹಿಸಿ ಮಾಜಿ ಸೈನಿಕರಿಂದು ದಿಲ್ಲಿಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರ ಅಧಿಕೃತ ನಿವಾಸದ ಹೊರಗೆ ಪ್ರತಿಭಟನೆಯೊಂದನ್ನು ನಡೆಸಿದ್ದಾರೆ. ಹಿಂದಿನ ಸಭೆಯೊಂದರಲ್ಲಿ ತಾವೆತ್ತಿದ್ದ ಕಳವಳಗಳಿಗೆ ಪ್ರತಿಸ್ಪಂದಿಸಲು ಜೇಟ್ಲಿ ವಿಫಲರಾಗಿದ್ದರೆಂದು ಅವರು ಆರೋಪಿಸಿದ್ದಾರೆ.
ಜೇಟ್ಲಿಯವರ ಅಧಿಕೃತ ನಿವಾಸದ ಹೊರಗೆ ಮಾಜಿ ಸೈನಿಕರು ಪ್ರದರ್ಶನ ನಡೆಸಿರುವುದು 2 ವಾರಗಳಲ್ಲಿಇದು 2ನೆ ಸಲವಾಗಿದೆ. ನಾವು ಜ.3ರಂದು ಸಚಿವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ್ದವು. ಆ ವೇಳೆ ಅವರು, ನಮ್ಮ ಬೇಡಿಕೆಗಳ ಬಗ್ಗೆ ರಕ್ಷಣಾ ಸಚಿವರಲ್ಲಿ (ಮನೋಹರ ಪಾರಿಕ್ಕರ್) ಮಾತನಾಡುವೆನೆಂಬ ಭರವಸೆ ನೀಡಿದ್ದರು. ಒಂದು ವಾರದೊಳಗೆ ತಮ್ಮನ್ನು ಮರಳಿ ಕಾಣುತ್ತೇನೆಂದು ಜೇಟ್ಲಿ ಹೇಳಿದ್ದರು. ಆದರೆ, ಈಗ 2 ವಾರವಾದರೂ ಅವರು ಉತ್ತರ ನೀಡಿಲ್ಲ. ಕೊಟ್ಟ ಮಾತು ಈಡೇರಿಸಲಾಗದವರು. ಎಂತಹ ವಿತ್ತ ಸಚಿವರು? ಎಂದು ನಿವೃತ್ತ ಗ್ರೂಪ್ ಕ್ಯಾಪ್ಟನ್ ವಿ.ಕೆ.ಗಾಂಧಿ ಪ್ರಶ್ನಿಸಿದ್ದಾರೆ.
ಜೇಟ್ಲಿ ಅಥವಾ ಪಾರಿಕ್ಕರ್ ತಮ್ಮಿಂದಿಗೆ ಮಾತುಕತೆ ನಡೆಸುವಲ್ಲಿವರೆಗೆ ಮಾಜಿ ಸೈನಿಕರು ಪ್ರತಿಭಟನೆಯನ್ನು ಮುಂದುವರಿಸಲಿದ್ದಾರೆಂದು ಭಾರತೀಯ ಮಾಜಿ ಯೋಧರ ಚಳವಳಿಯ ಪ್ರಧಾನಕಾರ್ಯದರ್ಶಿಯೂ ಆಗಿರುವ ಅವರು ತಿಳಿಸಿದ್ದಾರೆ
ಇಬ್ಬರಲ್ಲಿ ಒಬ್ಬರು ಸಚಿವ ತಮ್ಮಂದಿಗೆ ಮಾತುಕತೆಗೆ ಬರಬೇಕು. ಅಲ್ಲಿಯವರೆಗೆ ದಿಲ್ಲಿಯಿಂದ ಒಂದಂಗುಲವೂ ಕದಲುವುದಿಲ್ಲ. ಅವರು ತಮಗೆ ವಾಸ್ತವ ಒಆರ್‌ಒಪಿ ಕೊಡಲು ಬಯಸುವುದಿಲ್ಲವಾದಲ್ಲಿ, ಅವರದನ್ನು ತಮಗೆ ಸ್ಪಷ್ಟಪಡಿಸಬೇಕು. ಸುಳ್ಳು ಹೇಳುವುದು ಯಾಕೆ? ಎಂದ ಗಾಂಧಿ,ಸರಕಾರದ ಅಧಿಸೂಚನೆಯಲ್ಲಿ ಲೋಪಗಳಿವೆ. ಆದುದರಿಂದ ಅದು ಅಂಗೀಕಾರಾರ್ಹವಲ್ಲ ಎಂದಿದ್ದಾರೆ.
ಸುಮಾರು 200 ಮಂದಿ ಮಾಜಿ ಸೈನಿಕರು ಜೇಟ್ಲಿಯವರ ನಿವಾಸದ ಹೊರಗೆ ಪ್ರದರ್ಶನ ನಡೆಸುತ್ತಿದ್ದಾರೆ. ಮೇ.ಜ. ಸತ್ಬೀರ್ ಸಿಂಗ್ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆಂದು ಗಾಂಧಿ ಹೇಳಿದ್ದಾರೆ.





