ದ್ವಿಮುಖ ನೀತಿ: ಆರ್‌ಎಸ್‌ಎಸ್ ವಿರುದ್ಧ ರಾಬ್ಡಿದೇವಿ ಕಿಡಿ

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಆರ್‌ಜೆಡಿ ಮುಖಂಡರಾದ ರಾಬ್ಡಿದೇವಿ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಲಾಠಿ ಬಳಕೆಯಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಜನತಾದಳವನ್ನು "ಲಾಠಿ ಮೈನ್ ತೆಲ್ ಪೈಲ್ವಾನ್ ಪಾರ್ಟಿ" ಎಂದು ವ್ಯಂಗ್ಯವಾಡುವ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮುಖಂಡರು ತಮ್ಮ ಬಳಿ ಏಕೆ ಲಾಠಿ ಒಯ್ಯುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಆರ್‌ಜೆಡಿ ರಾಷ್ಟ್ರೀಯ ಮಂಡಳಿಯ 9ನೇ ತ್ರೈವಾರ್ಷಿಕ ಮುಕ್ತ ಅಧಿವೇಶನದಲ್ಲಿ ಅವರು ಮಾತನಾಡಿದರು. ಆರ್‌ಎಸ್‌ಎಸ್ ಮಂದಿ ತಮ್ಮ ದೈನಂದಿನ ತರಬೇತಿಯಲ್ಲಿ ಲಾಠಿ ಒಯ್ಯುತ್ತಾರೆ. ಆದರೆ ಆರ್‌ಜೆಡಿ ಕಾರ್ಯಕರ್ತರು ಲಾಠಿಗಳೊಂದಿಗೆ ರ್ಯಾಲಿಗೆ ಬನ್ನು ಎಂದು ಕರೆ ನೀಡಿದರೆ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ಅಣಕಿಸುತ್ತವೆ ಎಂದು ಲೇವಡಿ ಮಾಡಿದರು.
"ಆರ್‌ಎಸ್‌ಎಸ್ ಯಾವ ಬಗೆಯ ಸಂಘಟನೆ? ಅದರ ಹಿರಿಯ ಮುಖಂಡರು ಚೆಡ್ಡಿ ಧರಿಸಿ ಬರುತ್ತಾರೆ. ಚಡ್ಡಿ ಧರಿಸಿ ಸಾರ್ವಜನಿಕರ ಎದುರು ಬರಲು ಅವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಪ್ರೇಕ್ಷಕವರ್ಗ ನಗೆಗಡಲಲ್ಲಿ ತೇಲಿತು.
ಹಿಂದಿ- ಭೋಜಪುರಿ ಮಿಶ್ರಿತ ತಮ್ಮ ಗ್ರಾಮ್ಯ ಭಾಷೆಯಲ್ಲಿ ಮಾತನಾಡಿದ ರಾಬ್ಡಿದೇವಿ, ಆರ್‌ಜೆಡಿ ಹಾಗೂ ಮಹಾಘಟಬಂಧನ ನಾಯಕರು ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು. ಪರಸ್ಪರ ಕಾಲೆಳೆಯುವ ಚಟದಿಂದ ದೂರ ಇರಿ ಎಂದು ಕಿವಿಮಾತು ಹೇಳಿದರು. ನೀವು ಸಂಘಟಿತರಾಗಿದ್ದರೆ, ನಿತೀಶ್ ನೇತೃತ್ವದ ಸರ್ಕಾರ ಬಿಹಾರದಲ್ಲಿ 20 ವರ್ಷ ಆಳ್ವಿಕೆ ಮಾಡಲಿದೆ.
ನೀವು ಕಾಲೆಳೆಯಲು ಹೊರಟರೆ ಅದಯ ಕಷ್ಟಸಾಧ್ಯ ಎಂದು ಕುಟುಂಬದ ಹಿರಿಯರ ಬಗೆಯಲ್ಲಿ ಸಲಹೆ ಮಾಡಿದರು.







