ಹಣ್ಣು ಉತ್ಪಾದನೆ: ಭಾರತ ವಿಶ್ವಕ್ಕೇ ದ್ವಿತೀಯ

ನವದೆಹಲಿ: ದೇಶದಲ್ಲಿ ಹಸಿರು ಕ್ರಾಂತಿ 1960 ಹಾಗೂ 1970ರ ದಶಕದ ಆಹಾರ ಕೊರತೆಯನ್ನು ನೀಗಿಸಿದರೆ, ಬೇಳೆಕಾಳು ಉತ್ಪಾದನೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಈ ಮಧ್ಯೆ ಹಣ್ಣುಗಳ ಉತ್ಪಾದನೆ ದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಿದ್ದು, ಜಾಗತಿಕವಾಗಿ ಚೀನಾವನ್ನು ಹೊರತುಪಡಿಸಿದರೆ, ಭಾರತ ಎರಡನೇ ಸ್ಥಾನದಲ್ಲಿದೆ.
ತೋಟಗಾರಿಕಾ ಬೆಳೆಗಳ ವಾರ್ಷಿಕ ಪ್ರಗತಿಯಲ್ಲಿ ಹಣ್ಣುಗಳ ಕೊಡುಗೆ ಅತ್ಯಧಿಕ, ಕೃಷಿ ಉತ್ಪಾದನೆಯಲ್ಲಿ ತರಕಾರಿ ಬೆಳೆ ಅತಿದೊಡ್ಡ ಪ್ರಮಾಣದಲ್ಲಿದ್ದರೂ, ಹಣ್ಣುಗಳ ಉತ್ಪಾದನೆ ತರಕಾರಿಗಳ ಉತ್ಪಾದನೆ ಪ್ರಮಾಣಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎನ್ನುವುದು 2015ರ ಕೃಷಿ ಇಲಾಖೆಯ ತೋಟಗಾರಿಕೆ ಅಂಕಿ ಅಂಶಗಳನ್ನು ಅವಲೋಕಿಸಿದಾಗ ತಿಳಿದುಬರುತ್ತದೆ. ಹಣ್ಣು ಹಾಗೂ ತರಕಾರಿ ಉತ್ಪಾದನೆ ಹೀಗೆ ಎರಡೂ ವಲಯಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.
"ಹಣ್ಣುಗಳ ಪೈಕಿ ದ್ರಾಕ್ಷಿಗೆ ಅಗ್ರಸ್ಥಾನ. ದೇಶದಿಂದ 107.3 ಸಾವಿರ ಟನ್ ದ್ರಾಕ್ಷಿ ರಫ್ತಾಗುತ್ತಿದ್ದು, 2014-15ರಲ್ಲಿ 1086 ಕೋಟಿ ಮೌಲ್ಯದ ದ್ರಾಕ್ಷಿ ರಫ್ತಾಗಿದೆ. ರಫ್ತಿನಲ್ಲಿ ಅತ್ಯಧಿಕ ಪಾಲು ಹೊಂದಿರುವ ಇತರ ಹಣ್ಣುಗಳೆಂದರೆ, ಬಾಳೆಹಣ್ಣು ಮತ್ತು ಮಾವಿನಹಣ್ಣು.
ದೇಶದಲ್ಲಿ 2001-02ರ ಅವಧಿಯಲ್ಲಿ ಇದ್ದ ಒಟ್ಟು ತೋಟಗಾರಿಕೆ ಉತ್ಪನ್ನ ಪ್ರಮಾಣ 145.8 ಮೆಟ್ರಿಕ್ ಟನ್‌ನಿಂದ 2015-16ರಲ್ಲಿ 283.5 ಮೆಟ್ರಿಕ್ ಟನ್‌ಗೆ ಹೆಚ್ಚಿದೆ. ತೋಟಗಾರಿಕಾ ಬೆಳೆ ಪ್ರದೇಶ ಕೂಡಾ 16.5 ದಶಲಕ್ಷ ಹೆಕ್ಟೇರ್‌ನಿಂದ 23.4 ದಶಲಕ್ಷ ಹೆಕ್ಟೇರ್‌ಗೆ ಏರಿದೆ.
ತೋಟಗಾರಿಕಾ ಕ್ಷೇತ್ರದಲ್ಲಿ ಕ್ಷಿಪ್ರ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ಪನ್ನಗಳಿಗೆ ದೇಶೀಯವಾಗಿಯೂ ಬೇಡಿಕೆ ಹೆಚ್ಚುತ್ತಿದೆ. ಅತ್ಯಧಿಕ ಹಣ್ಣು ಉತ್ಪಾನೆ ಮಾಡುತ್ತಿರುವ ಚೀನಾ, ಅಮೆರಿಕ, ಬ್ರೆಜಿಲ್, ಸ್ಪೇನ್, ಮೆಕ್ಸಿಕೊ, ಇಟೆಲಿ, ಇಂಡೋನೇಷ್ಯಾ< ಫಿಲಿಪೀನ್ಸ್‌ಗಳಿಗೆ ಹೋಲಿಸಿದರೆ ಭಾರತದಲ್ಲಿ ಉತ್ಪಾದಕತೆ ಪ್ರಮಾಣ ಕಡಿಮೆ ಇದ್ದು, ಇದನ್ನು ಸುಧಾರಿಸಲು ಸಾಕಷ್ಟು ಅವಕಾಶಗಳಿವೆ.
ಭಾರತದ ತೋಟಗಾರಿಕೆ ಯಶಸ್ಸು ಮುಖ್ಯವಾಗಿ ಸಣ್ಣ ಪಟ್ಟಣಗಳು ಹಾಗೂ ಜಿಲ್ಲೆಗಳನ್ನು ಅವಲಂಬಿಸಿದೆ. 2012-13ರಲ್ಲಿ ಆಂಧ್ರಪ್ರದೇಶದ ಅನಂತಪುರ ಹಾಗೂ ಚಿತ್ತೂರು, ಜಮ್ಮು ಕಾಶ್ಮೀರದ ಬಾರಾಮುಲ್ಲಾ, ತೆಲಂಗಾಣದ ನಲ್ಗೊಂಡ, ಮಧ್ಯಪ್ರದೇಶದ ಸಾಗರ ಹಾಗೂ ಶಹದೋಲ್, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಮಹಾರಾಷ್ಟ್ರದ ಪುಣೆ, ಔರಂಗಾಬಾದ್, ಜಲಗಾಂವ್ ಹಾಗೂ ಸಾಂಗ್ಲಿ ಉತ್ತಮ ಸಾಧನೆ ತೋರಿವೆ.







