ವಿವಾಹೇತರ ಸಂಬಂಧ: ಪ್ರೇಮಿ ಕೊಂದು ತಾನೂ ಸತ್ತ ಪೊಲೀಸ್

ನವದೆಹಲಿ: ಇಲ್ಲಿನ ಸಬ್ ಇನ್‌ಸ್ಪೆಕ್ಟರ್ ತನ್ನ ಪ್ರೇಮಿಯನ್ನು ಐದು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ, ಬಳಿಕ ತಾನೂ ಮೂರು ಸುತ್ತು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದ್ವಾರಕ ಪಾರ್ಕ್‌ನಲ್ಲಿ ಮಾಡಿಕೊಂಡ ಒಪ್ಪಂದದಂತೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ವಿಜೇಂದ್ರ ವರ್ಮಾ (30) ಎಂಬ ಪಿಎಸ್‌ಐ ರಣಹೊಲಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 26 ವರ್ಷದ ಮಹಿಳೆ ಜತೆ ಸಂಬಂದ ಹೊಂದಿದ್ದ.
ಆಕೆ ಆತನನ್ನು ವಿವಾಹವಾಗುವಂತೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಆದರೆ ವರ್ಮಾ ಈ ಮೊದಲೇ ವಿವಾಹವಾಗಿದ್ದು, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ರಾಜಸ್ಥಾನದ ಝಾಜ್ಜಾರ್‌ನಲ್ಲಿ ವಾಸವಿದ್ದಾರೆ.
ಪದೇ ಪದೇ ಕೆಲಸಕ್ಕೆ ಗೈರುಹಾಜರಾಗುತ್ತಿದ್ದ ವರ್ಮಾಗೆ ಷೋಕಾಸು ನೋಟಿಸ್ ಕೂಡಾ ನೀಡಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ನಿಖಿತಾ ಚೌಹಾಣ್ ಎಂಬ ಈ ಮಹಿಳೆ ಉತ್ತಮ್ ನಗರದ ಪತ್ರಿಕೆಯೊಂದರ ವರದಿಗಾರ್ತಿ. ಘಟನೆ ನಡೆದ ತಕ್ಷಣ ಆಕೆಯ ಪರ್ಸ್‌ನಲ್ಲಿದ್ದ ದಾಖಲೆಗಳನ್ನು ವಶಪಡಿಸಿಕೊಂಡು ಸ್ಕ್ಯಾನ್ ಮಾಡಲಾಗಿದೆ. ಈ ಘಟನೆ ಭಾನುವಾರ ಮಧ್ಯಾಹ್ನದ ವೇಳೆಗೆ ನಡೆದಿದ್ದು, ದ್ವಾರಕಾದಲ್ಲಿರುವ ವಸತಿ ಸಂಕೀರ್ಣದ ಎದುರಿನ ಪಾರ್ಕ್‌ನಲ್ಲಿ ಸಂಭವಿಸಿದೆ.
ಪೊಲೀಸರು ಬರುವ ಮುನ್ನ ಚೌಹಾಣ್ ಮತ್ತೊಬ್ಬ ವ್ಯಕ್ತಿಯ ಜತೆ ವಾಗ್ವಾದ ನಡೆಸುತ್ತಿದ್ದ. ಇಬ್ಬರೂ ಒಂದೇ ಬೆಂಚ್‌ನಲ್ಲಿ ಕುಳಿತಿದ್ದು, ವಾಗ್ವಾದಕ್ಕೆ ಇಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣ ಎದ್ದುನಿಂತ ವರ್ಮಾ, ಪಿಸ್ತೂಲ್ ಎಳೆದುಕೊಂಡು ಮಹಿಳೆಯತ್ತ ಗುಂಡುಹಾರಿಸಿದ. ತಕ್ಷಣ ತಾನೂ ಗುಂಡು ಹಾರಿಸಿಕೊಂಡ ಎಂದು ಪ್ರತ್ಯಕ್ಷದರ್ಶಿ ಬ್ಯಾರಿಸ್ಟರ್ ಸಿಂಗ್ ವಿವರಿಸಿದ್ದಾರೆ. ತಕ್ಷಣ ಪೊಲೀಸರು ಆಗಮಿಸಿ ಇಬ್ಬರೂ ಆಸ್ಪತ್ರೆಗೆ ಒಯ್ದರು. ಆಗ ಮಹಿಳೆ ಮೃತಪಟ್ಟಿರುವುದನ್ನು ವೈದ್ಯರು ಪ್ರಕಟಿಸಿದರು. ವರ್ಮಾ ಬಳಿಕ ಎಐಐಎಂಎಸ್ ತುರ್ತುಚಿಕಿತ್ಸಾ ಘಟಕದಲ್ಲಿ ಮೃತಪಟ್ಟ.
2012ರಿಂದಲೇ ಇವರ ನಡುವೆ ಸಂಬಂಧ ಇತ್ತು ಎನ್ನಲಾಗಿದ್ದು, ಇಬ್ಬರೂ ವಿವಾಹಿತರು ಎಂದು ನೆರೆಯವರು ತಿಳಿಸಿದ್ದಾರೆ. ಒಂದು ಹಂತದಲ್ಲಿ ಮಹಿಳೆ ಪಿಎಸ್‌ಐ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಬಳಿಕ ಎಫ್‌ಐಆರ್ ರದ್ದು ಮಾಡುವಂತೆ ಕೋರಿದರು.
ಮೊದಲ ಪತ್ನಿಗೆ ವಿಚ್ಛೇದನ ನೀಡುವುದಾಗಿ ಪಿಎಸ್‌ಐ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ವಾಪಾಸು ಪಡೆದಿದ್ದಳು. ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡಲು ವರ್ಮಾ ತಂದೆ ಒಪ್ಪಿಗೆ ನೀಡಿರಲಿಲ್ಲ. ಈ ಎಲ್ಲ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.







