ಇಂದು ರಬ್ಬರ್ ಬೆಳೆಗಾರರಿಂದ ಹಕ್ಕೊತ್ತಾಯ ಸಭೆ
ಪುತ್ತೂರು, ಜ.17: ರಬ್ಬರ್ ಬೆಳೆಗೆ ಕರ್ನಾಟಕ ರಾಜ್ಯ ಸರಕಾರವು ಕೇರಳ ಮಾದರಿಯಲ್ಲಿ ಪ್ರೋತ್ಸಾಹ ಧನ ನೀಡುವಂತೆ ಆಗ್ರಹಿಸಿ ಜ.18ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಕ್ಕೊತ್ತಾಯ ಸಭೆ ನಡೆಯಲಿದೆ ಎಂದು ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಸಂಘ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ತಿಳಿಸಿದ್ದಾರೆ.
ರಬ್ಬರ್‌ಗೆ ಕೇರಳ ರಾಜ್ಯ ಸರಕಾರ 150 ರೂ. ಬೆಂಬಲ ಬೆಲೆ ಘೋಷಿಸಿದೆ. ಕೇರಳ ಬಜೆಟ್‌ನಲ್ಲಿ 300 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಯೋಜನೆ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು. ರಬ್ಬರ್ ಬೋರ್ಡ್ ನಿಷ್ಕ್ರಿಯವಾಗಿದೆ. ಕಳೆದೆರಡು ವರ್ಷಗಳಿಂದ ರಬ್ಬರ್ ಮಂಡಳಿಗೆ ಪುನರ್ ನಾಮಕರಣ ನಡೆಯುತ್ತಿಲ್ಲ. ಪ್ರಬಾರ ಅಧ್ಯಕ್ಷರಿಂದ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ರಬ್ಬರ್ ಉತ್ಪಾದನಾ ಆಯುಕ್ತರು ಇಲ್ಲದಿರುವುದರಿಂದ ರೈತರ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯದೊಂದಿಗೆ ರಬ್ಬರು ಮಂಡಳಿಯನ್ನು ಪುನರ್‌ರಚಿಸಬೇಕು ಎಂದು ಹಕ್ಕೊತ್ತಾಯ ಸಭೆಯಲ್ಲಿ ಆಗ್ರಹಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಶ್ರೀರಾಮ್ ಪಕ್ಕಳ, ಜಾರ್ಜ್ ಕುಟ್ಟಿ, ಸುಭಾಷ್ ನಾಯಕ್ ಉಪಸ್ಥಿತರಿದ್ದರು.





