ದಲಿತ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆ; ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಬಿಗುವಿನ ವಾತಾವರಣ

ಹೈದರಾಬಾದ್, ಜ.18:ಹೈದರಾಬಾದ್‌ನ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿ ಇಂದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ರೋಹಿತ್ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನೂರಾರು ಮಂದಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ಧಾರೆ
ಸ್ನೇಹಿತನ ಕೋಣೆಯಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿ ರೋಹಿತ್ ಅವರ ಶವವನ್ನು ಎತ್ತಲು ಇಂದು ಬೆಳಿಗ್ಗೆ ಪೊಲೀಸರು ತೆರಳಿದಾಗ ಅಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು ಅಡ್ಡಿಪಡಿಸಿದರು.ಆಯಂಬುಲೆನ್ಸ್‌ಗೆ ಹಾನಿಗೊಳಿಸಿದರು ಎಂದು ತಿಳಿದು ಬಂದಿದೆ.
ವಿವಿಯ ಉಪ ಕುಲಪತಿ ಪ್ರೊ. ಅಪ್ಪಾ ರಾವ್ ಪೊಡಿಲೆ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಕುಲಪತಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ದೆತ್ ನೋಟ್ ವಿವರ: " ನನ್ನ ಸಾವಿಗೆ ನಾನೇ ಕಾರಣ. ಆತ್ಮಹತ್ಯೆಗೆ ಯಾರೂ ನನಗೆ ಪ್ರಚೋದನೆ ನೀಡಿಲ್ಲ. ನನ್ನ ಸಾವಿನ ಕಾರಣಕ್ಕಾಗಿ ಯಾರಿಗೂ ತೊಂದರೆ ಕೊಡುವುದು ಬೇಡ " ಹೀಗೆಂದು ಮೃತ ರೋಹಿತ್ "ದೆತ್ ನೋಟ್ " ಬರೆದಿಟ್ಟಿದ್ದಾರೆ.
ತನ್ನ ಸ್ನೇಹಿತನ ಕೋಣೆಯಲ್ಲಿ ರೋಹಿತ್ ಸಾವಿಗೆ ಮುನ್ನ ಬರೆದಿರುವ ಐದು ಪುಟಗಳ ಪತ್ರದಲ್ಲಿ ಇತ್ತೀಚಿನ ದಿನಗಳ ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ತಕ್ತಪಡಿಸಿದ್ದಾರೆ. ಫಿಲೋಶಿಪ್ ಮೂಲಕ ತನಗೆ ಬರುವ ಹಣವನ್ನು ಕುಟುಂಬಕ್ಕೆ ನೀಡುವಂತೆ ರೋಹಿತ್ ತಿಳಿಸಿದ್ದಾರೆ.
ರೋಹಿತ್ ಸಾವಿಗೂ ಮುನ್ನ ತನ್ನ ತಾಯಿ ಜೊತೆ ಮಾತನಾಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡಿರುವುದು ಅವರ ಮಾತಿನಲ್ಲಿ ವ್ಯಕ್ತವಾಗಿತ್ತು. ಎಂದು ಮೂಲಗಳು ತಿಳಿಸಿವೆ.
ಸಿಎಸ್‌ಐಆರ್ ಫೆಲೋಶಿಪ್ ಮೂಲಕ ಪಿಎಚ್‌ಡಿ ಮಾಡುತ್ತಿದ್ದ ರೋಹಿತ್ ಐವರನ್ನು ಅಮಾನತುಗೊಳಿಸಿದ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ರವಿವಾರ ಅಪರಾಹ್ನ ತನಗೆ ತುರ್ತು ಕೆಲಸ ಇರುವುದಾಗಿ ಎನ್‌ಆರ್‌ಎಸ್ ಹಾಸ್ಟೆಲ್‌ನ ತನ್ನ ಸ್ನೇಹಿತನ ಕೋಣೆ ಸೇರಿದ್ದಾರೆ. ಸಂಜೆ ತನಕವೂ ಇವರು ವಾಪಸಾಗದೆ ಇದ್ಧಾಗ ಸ್ನೇಹಿತರು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಸ್ನೇಹಿತನ ಕೋಣೆಯ ಬಾಗಿಲನ್ನು ಒಡೆದು ಸ್ನೇಹಿತರು ಒಳ ಪ್ರವೇಶಿಸಿದಾಗ ರೋಹಿತ್‌ನ ಶವ ಸ್ನೇಹಿತನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.







