ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿ ಶಮಿ ಬದಲಿಗೆ ಜಸ್ಪ್ರೀತ್ ಬುಮ್ರಾ ಆಯ್ಕೆ

ಹೊಸದಿಲ್ಲಿ, ಜ.18: ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಗಾಯಾಳು ಮುಹಮ್ಮದ್ ಶಮಿ ಬದಲಿಗೆ ಗುಜರಾತ್‌ನ ಮಧ್ಯಮ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಆಸೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಶಮಿ ಬದಲಿಗೆ ಉತ್ತರ ಪ್ರದೇಶ ವೇಗದ ಬೌಲರ್ ಭುವನೇಶ್ವರ್ ಕುಮಾರ್‌ರನ್ನು ಆಯ್ಕೆ ಮಾಡಲಾಗಿತ್ತು. ಸೋಮವಾರ ಸಂದೀಪ್ ಪಾಟೀಲ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಬುಮ್ರಾರನ್ನು ಟ್ವೆಂಟಿ-20 ಸರಣಿಗಾಗಿ ಆಸ್ಟ್ರೇಲಿಯಕ್ಕೆ ಕಳುಹಿಸಿಕೊಡಲು ನಿರ್ಧರಿಸಿದೆ.
9 ತಿಂಗಳ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದ ಪಶ್ಚಿಮ ಬಂಗಾಳದ ವೇಗದ ಬೌಲರ್ ಶಮಿಗೆ ನೆಟ್ ಪ್ರಾಕ್ಟೀಸ್‌ನ ವೇಳೆ ಮತ್ತೊಮ್ಮೆ ಗಾಯದ ಸಮಸ್ಯೆ ಮರುಕಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಆಸ್ಟ್ರೇಲಿಯ ವಿರುದ್ಧದ ಸೀಮಿತ ಓವರ್ ಸರಣಿಯಿಂದ ಹೊರಗುಳಿದಿದ್ದರು.
ಬುಮ್ರಾ ಅವರು ಟ್ವೆಂಟಿ-20 ತಂಡಕ್ಕೆ ಆಯ್ಕೆಯಾಗಿರುವ ಇನ್ನುಳಿದ ಆಟಗಾರರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಆಶೀಷ್ ನೆಹ್ರಾ, ಸುರೇಶ್ ರೈನಾ ಹಾಗೂ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಜ.22 ರಂದು ಆಸ್ಟ್ರೇಲಿಯಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿರುವ ಗುಜರಾತ್‌ನ ಆಟಗಾರ ಬುಮ್ರಾ ಈ ವರ್ಷದ ರಣಜಿ ಋತುವಿನಲ್ಲಿ 8 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲೀಸ್ಟ್ ಎ ಪಂದ್ಯಗಳಲ್ಲಿ 36 ವಿಕೆಟ್‌ಗಳು ಹಾಗೂ ದೇಶೀಯ ಟ್ವೆಂಟಿ-20 ಪಂದ್ಯದಲ್ಲಿ 52 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯು ಜ.26, 29 ಹಾಗೂ 31 ರಂದು ನಡೆಯಲಿದೆ.







