ಕೆರೆ ಒತ್ತುವರಿದಾರರಿಗೆ ಫೆ.15ರೊಳಗೆ ನೋಟಿಸ್; ಫೆ.29ರೊಳಗೆ ಉತ್ತರ ನೀಡಲು ಸೂಚನೆ

ಬೆಂಗಳೂರು, ಜ. 18: ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶ ದಲ್ಲಿ ಕೆರೆ ಭೂಮಿ ಒತ್ತುವರಿ ಮಾಡಿಕೊಂಡಿರುವವರಿಗೆ ಫೆ.15ರೊಳ ಗಾಗಿ ನೋಟಿಸ್ ಜಾರಿ ಮಾಡಬೇಕು ಎಂದು ತಾಕೀತು ಮಾಡಿರುವ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ್, ಫೆ.29ರ ಒಳಗಾಗಿ ನೋಟಿಸ್‌ಗೆ ಉತ್ತರ ನೀಡಲು ಗಡುವು ನೀಡಲಾಗಿದೆ ಎಂದು ಪ್ರಕಟಿಸಿದ್ದಾರೆ.
ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ತಹಶೀಲ್ದಾರರ ಸಭೆಯ ಬಳಿಕ ಮಾತನಾಡಿದ ಅವರು, ಫೆಬ್ರವರಿ ಅಂತ್ಯದೊಳಗಾಗಿ ಕೆರೆ ಭೂಮಿ ಒತ್ತುವರಿದಾರರಿಂದ ಉತ್ತರ ಪಡೆದು ಕೊಂಡು ಆ ಬಳಿಕ ಮಾ.1ಕ್ಕೆ ಅಧಿಕಾರಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಬೆಂಗಳೂರು ನಗರ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮದ ತಾಲೂಕು ಹಾಗೂ ಗ್ರಾಮಾಂತರ ಜಿಲ್ಲೆಯ ಆನೇಕಲ್, ದೊಡ್ಡಬಳ್ಳಾಪುರ ತಾಲೂಕು ತಹಶೀಲ್ದಾರ್‌ಗಳು, ಉಪವಿಭಾಗಾಕಾರಿ ಗಳು, ನೋಟಿಸ್ ನೀಡಿದವರ ಬಗ್ಗೆ ಮಾಹಿತಿಯನ್ನು ಕೋಳಿವಾಡ್ ಇದೇ ವೇಳೆ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕು 372 ಮಂದಿ ಒತ್ತುವರಿದಾರಿದ್ದು, 349 ಎಕರೆ ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಪೈಕಿ 351 ಮಂದಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿದರು. ಈ ವೇಳೆ ಕೋಳಿವಾಡ್, ಉಳಿದವರಿಗೆ ಕೂಡಲೇ ನೋಟಿಸ್ ನೀಡಬೇಕೆಂದು ಸೂಚಿಸಿದರು.
ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 210 ಕೆರೆಗಳಿಗೆ ಎಂದು ಉಪವಿಭಾಗಾಧಿಕಾರಿ ನಾಗರಾಜ್ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪಿಸಿದ ಸಮಿತಿ ಅಧ್ಯಕ್ಷ ಕೋಳಿವಾಡ್, ಸಮಿತಿಗೆ ನೀಡಿದ ದಾಖಲೆಗ ಳಲ್ಲಿ 201 ಕೆರೆಗಳೆಂದು ಗುರುತಿಸಲಾಗಿದೆ. ಆದರೆ, ಇದೀಗ ಕೆರೆಗಳು ಏಕಾಏಕಿ ಜಾಸ್ತಿ ಆಗಲು ಕಾರಣವೇನು? ಸ್ಪಷ್ಟ ಮಾಹಿತಿ ನೀಡಿ ಎಂದು ಖಡಕ್ ಸೂಚನೆ ನೀಡಿದರು. ಆನೇಕಲ್ ತಾಲೂಕಿನಲ್ಲಿಯೂ ಕೆರೆಗಳ ಬಗ್ಗೆ ಗೊಂದಲಗಳಿದ್ದು, ಸಮಿತಿಗೆ ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ನೀಡಬೇಕು. ಇಲ್ಲವಾದರೆ, ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಚಿಂತನೆ ನಡೆಸಬೇಕಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಕೋಳಿವಾಡ್ ಇದೇ ವೇಳೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರು ಉತ್ತರ ತಾಲೂಕಿನ ವ್ಯಾಪ್ತಿಯಲ್ಲಿನ 372 ಮಂದಿ ಕೆರೆ ಭೂಮಿ ಒತ್ತುವರಿದಾರರ ಪೈಕಿ 351 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ, ದಕ್ಷಿಣ ತಾಲೂಕಿನಲ್ಲಿ 110 ಮಂದಿ ಪೈಕಿ 97 ಮಂದಿಗೆ, ಪೂರ್ವ ತಾಲೂಕಿನಲ್ಲಿ 840 ಮಂದಿ ಪೈಕಿ 832 ಮಂದಿಗೆ ಹಾಗೂ ಆನೇಕಲ್‌ನಲ್ಲಿ 1,407 ಮಂದಿ ಪೈಕಿ 503 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1,494 ಮಂದಿ ಕೆರೆ ಭೂಮಿ ಒತ್ತುವರಿದಾರರ ಪೈಕಿ ಈವರೆಗೂ ಯಾರೊಬ್ಬರಿಗೂ ನೋಟಿಸ್ ಜಾರಿ ಮಾಡಿಲ್ಲ ಎಂಬುದು ಸಮಿತಿ ಅಧ್ಯಕ್ಷ ಕೋಳಿವಾಡ್ ಸೇರಿದಂತೆ ಸದಸ್ಯ ರನ್ನು ತೀವ್ರವಾಗಿ ಕೆರಳಿಸಿತು.
ಕೂಡಲೇ ಒತ್ತುವರಿದಾರರಿಗೆ ನೋಟಿಸ್ ನೀಡಿ ಎಂಬ ಖಡಕ್ ಸೂಚನೆಯನ್ನು ಸಮಿತಿ ಅಧಿಕಾರಿಗಳಿಗೆ ನೀಡಿತು.





