40 ಕೋಟಿ ರೂ.ವೆಚ್ಚದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಧರ್ಮಶಾಲೆ: ಸುಧಾಮೂರ್ತಿ

ಬೆಂಗಳೂರು, ಜ. 18: ನಗರದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಲವತ್ತು ಕೋಟಿ ರೂ.ವೆಚ್ಚದಲ್ಲಿ ರೋಗಿಗಳು ಮತ್ತವರ ಸಂಬಂಧಿಕರು ಉಳಿದುಕೊಳ್ಳಲು ಧರ್ಮಶಾಲೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷ ಸುಧಾಮೂರ್ತಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2002ರಲ್ಲಿ ನಿರ್ಮಿಸಿದ್ದ ಧರ್ಮಶಾಲಾ ನವೀಕರಣಕ್ಕಾಗಿ 2 ಕೋಟಿ ರೂ. ನೀಡಲಾಗುವುದು. ಹೊಸ ಧರ್ಮಶಾಲಾ ನಿರ್ಮಾಣಕ್ಕೆ 40 ಕೋಟಿ ರೂ. ಒದಗಿಸ ಲಾಗುವುದು. ಈ ಕಾರ್ಯಕ್ಕೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರಕಾರ ನೀಡಬೇಕೆಂದರು.
ಸಂಕಷ್ಟದಲ್ಲಿರುವವರಿಗೆ ಇನ್ಫೋಸಿಸ್ ಫೌಂಡೇಷನ್ ಅಗತ್ಯ ನೆರವು ನೀಡಲಿದೆ. ಜನ ಸಾಮಾನ್ಯರ ಆರೋಗ್ಯದ ಬಗ್ಗೆ ಫೌಂಡೇಷನ್ ವಿಶೇಷ ಕಾಳಜಿ ಹೊಂದಿದೆ ಎಂದ ಅವರು, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರಿಗೆ ಉತ್ತರ ಚಿಕಿತ್ಸೆ ದೊರೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್, ಕಿದ್ವಾಯಿ ಆಸ್ಪತ್ರೆಯಲ್ಲಿ 6ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ಶಸ ಚಿಕಿತ್ಸಾ ಕೊಠಡಿ ನಿರ್ಮಿಸಲಾಗುವುದು. ಕೇಂದ್ರದ ಸಹಯೋಗದಲ್ಲಿ ಕಿದ್ವಾಯಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು 120 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ನುಡಿದರು.
ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ಲಿಂಗೇಗೌಡ, ವೈದ್ಯಕೀಯ ಅಧೀಕ್ಷಕ ಡಾ.ಪ್ರಮೋದ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.





