ಎಲ್‌ಕೆಜಿ, ಯುಕೆಜಿ ಪ್ರವೇಶ ತಡೆ ತೆರವು: ಹೈಕೋರ್ಟ್
ಬೆಂಗಳೂರು, ಜ.18: ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಪ್ರವೇಶ ನೀಡಬೇಕೆಂಬ ರಾಜ್ಯ ಸರಕಾರದ ಆದೇಶಕ್ಕೆ ಈ ಮುನ್ನ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ತಡೆಯಾಜ್ಞೆ ತೆರವುಗೊಳಿಸುವಂತೆ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠವು ಈ ಮಧ್ಯಾಂತರ ಆದೇಶ ನೀಡಿತು.
ಒಂದು ವೇಳೆ ಈ ತಡೆಯಾಜ್ಞೆ ತೆರವುಗೊಳಿಸದೇ ಹೋದರೆ ಇದು ಕೇವಲ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಒಂದನೆ ತರಗತಿ ಪ್ರವೇಶಕ್ಕೂ ತೊಂದರೆ ಉಂಟು ಮಾಡುತ್ತದೆ. ಈ ಮೂಲಕ ಸೌಲಭ್ಯವಂಚಿತ ಮಕ್ಕಳನ್ನು ಗಂಡಾಂತರಕ್ಕೆ ನೂಕಿದಂತಾಗುತ್ತದೆ ಎಂದು ನ್ಯಾಯಪೀಠವು ತಡೆಯಾಜ್ಞೆ ತೆರವಿಗೆ ಕಾರಣ ನೀಡಿದೆ.
ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಸಲ್ಲಿಸಿದ್ದ ರಿಟ್ ಅರ್ಜಿಯ ಮೇರೆಗೆ ರಜಾಕಾಲದ ಏಕಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಕಳೆದ ತಿಂಗಳು ತಡೆ ನೀಡಿದ್ದರು.
2016-2017ನೆ ಸಾಲಿನಲ್ಲಿ ಶಾಲಾ ಆಡಳಿತ ಮಂಡಳಿ 1,500ಕ್ಕೂ ಹೆಚ್ಚು ಸದಸ್ಯ ಶಾಲೆಗಳಲ್ಲಿ ಆರ್‌ಟಿಇ ಅಡಿ ಎಲ್‌ಕೆಜಿ ಹಾಗೂ ಯುಕೆಜಿಗೆ ಪ್ರವೇಶ ನೀಡಬಾರದು ಎಂದು ಆದೇಶಿಸಲಾಗಿತ್ತು.





