ಆಸ್ಟ್ರೇಲಿಯನ್ ಓಪನ್: ಜೊಕೊವಿಕ್, ಫೆಡರರ್ ಶುಭಾರಂಭ

ಮೆಲ್ಬೋರ್ನ್, ಜ.18: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಹಾಗೂ ಗ್ರಾನ್‌ಸ್ಲಾಮ್ ದಾಖಲೆ ವೀರ ರೋಜರ್ ಫೆಡರರ್ ಸೋಮವಾರ ಇಲ್ಲಿ ಆರಂಭವಾಗಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಹಾಲಿ ಚಾಂಪಿಯನ್ ಜೊಕೊವಿಕ್ ದಕ್ಷಿಣ ಕೊರಿಯಾದ ಚುಂಗ್ ಹಿಯಾನ್‌ರನ್ನು 6-2, 6-3, 6-4 ಸೆಟ್‌ಗಳಿಂದ ಮಣಿಸಿದರು. ಆರನೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಕ್ 2014ರ ಅಕ್ಟೋಬರ್ ಬಳಿಕ ಕೇವಲ 6 ಪಂದ್ಯಗಳಲ್ಲಿ ಸೋತಿದ್ದು, 14 ಟ್ರೋಫಿಗಳನ್ನು ಜಯಿಸಿದ್ದಾರೆ. ಇದರಲ್ಲಿ ಮೂರು ಗ್ರಾನ್‌ಸ್ಲಾಮ್ ಪ್ರಶಸ್ತಿಯೂ ಸೇರಿದೆ.
ಸ್ವಿಸ್‌ನ ಮೂರನೆ ಶ್ರೇಯಾಂಕದ ಫೆಡರರ್ ಜಾರ್ಜಿಯದ ನಿಕೊಲಝ್ ಬಾಸಿಲಶ್ವಿಲಿ ವಿರುದ್ಧ ಕೇವಲ 72 ನಿಮಿಷಗಳ ಹೋರಾಟದಲ್ಲಿ 6-2, 6-1, 6-2 ಸೆಟ್‌ಗಳಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗಾಪೊಲೊವ್‌ರನ್ನು ಎದುರಿಸಲಿದ್ದಾರೆ.
ಸೆರೆನಾ, ಶರಪೋವಾಗೆ ಸುಲಭ ಜಯ:
ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಕ್ಯಾಮಿಲಾ ಜಿಯೋರ್ಗಿ ಅವರನ್ನು 6-4, 7-5 ಸೆಟ್‌ಗಳಿಂದ ಮಣಿಸಿ ಶ್ರೇಷ್ಠ ಫಾರ್ಮ್‌ನ್ನು ಮುಂದುವರಿಸಿದ್ದಾರೆ.
ಆಸ್ಟ್ರೆಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಐದನೆ ಶ್ರೇಯಾಂಕದ ಮರಿಯಾ ಶರಪೋವಾ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ನಾವೊ ಹಿಬಿನೊರನ್ನು 6-1, 6-3 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು.
ಕಳೆದ ವರ್ಷ ಫೈನಲ್‌ನಲ್ಲಿ ಸೋತಿರುವ 28ರ ಹರೆಯದ ಶರಪೋವಾ ಎರಡನೆ ಸುತ್ತಿನ ಪಂದ್ಯದಲ್ಲಿ ಬೆಲಾರಸ್‌ನ ಅಲಿಯಾಕ್‌ಸಂಡ್ರಾ ಸಾಸ್‌ನೊವಿಕ್‌ರನ್ನು ಎದುರಿಸಲಿದ್ದಾರೆ. ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ವೋಝ್ನಿಯಾಕಿ, ಸ್ಟೀಫನ್ಸ್: ಅಮೆರಿಕದ ಯುವ ಆಟಗಾರ್ತಿ ಸ್ಲೊಯಾನೆ ಸ್ಟೀಫನ್ಸ್ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯ ಮೊದಲಸುತ್ತಿನಲ್ಲಿ ಸೋತಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಚೀನಾದ ವಾಂಗ್‌ಕ್ಸಿಯಾಂಗ್ ವಿರುದ್ಧ 6-3, 6-3 ಸೆಟ್‌ಗಳಿಂದ ಶರಣಾದರು.
ವೋಝ್ನಿಯಾಕಿ ಔಟ್: ವಿಶ್ವದ ಮಾಜಿ ನಂ.1 ಆಟಗಾರ್ತಿ ಕ್ಯಾರೊಲಿನಾ ವೋಝ್ನಿಯಾಕಿ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಎಡವಿದ್ದಾರೆ. ಕಝಕ್‌ಸ್ತಾನದ ಯೂಲಿಯಾ ಪುಟಿಂಟ್‌ಸೇವಾ ಡೆನ್ಮಾರ್ಕ್‌ನ ವೋಝ್ನಿಯಾಕಿ ಅವರನ್ನು 3 ಗಂಟೆ, 12 ನಿಮಿಷಗಳ ಪಂದ್ಯದಲ್ಲಿ 1-6, 7-6(7/3), 6-4 ಸೆಟ್‌ಗಳಿಂದ ಸೋಲಿಸಿದ್ದಾರೆ.
ಭಾಂಬ್ರಿಗೆ ಸೋಲು
ಮೆಲ್ಬೋರ್ನ್, ಜ.18: ವಿಶ್ವದ ನಂ.6ನೆ ಆಟಗಾರ ಥಾಮಸ್ ಬೆರ್ಡಿಕ್ ವಿರುದ್ಧ ನೇರ ಸೆಟ್‌ಗಳಿಂದ ಸೋಲುಂಡಿರುವ ಭಾರತದ ಯೂಕಿ ಭಾಂಬ್ರಿ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ.
ಸೋಮವಾರ ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಒಂದು ಗಂಟೆ ಹಾಗೂ 45 ನಿಮಿಷಗಳ ಹೋರಾಟದಲ್ಲಿ ಬೆರ್ಡಿಕ್ ಅವರು ಯೂಕಿ ಅವರನ್ನು 7-5, 6-1, 6-2 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ಸತತ 50ನೆ ಗ್ರಾನ್‌ಸ್ಲಾಮ್ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಿದರು.
ಭಾರತದ ಯುವ ಆಟಗಾರ ಭಾಂಬ್ರಿ ಪಂದ್ಯದಲ್ಲಿ ಯಾವ ಹಂತದಲ್ಲೂ ಬೆರ್ಡಿಕ್‌ಗೆ ಪೈಪೋಟಿ ನೀಡಲು ವಿಫಲರಾದರು. ಕಳೆದ ವರ್ಷ ಸೆಮಿ ಫೈನಲ್‌ವರೆಗೂ ತಲುಪಿದ್ದ ಬೆರ್ಡಿಕ್ ಮುಂದಿನ ಸುತ್ತಿನಲ್ಲಿ ಬೋಸ್ನಿಯದ ಮಿರ್ಝಾ ಬ್ಯಾಸಿಕ್‌ರನ್ನು ಎದುರಿಸಲಿದ್ದಾರೆ.







