ಬರೋಡಾ,ಉತ್ತರ ಪ್ರದೇಶ ಫೈನಲ್‌ಗೆ
ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿ
ಮುಂಬೈ, ಜ.18: ಬರೋಡಾ ಹಾಗೂ ಉತ್ತರ ಪ್ರದೇಶ ತಂಡಗಳು ಮುಶ್ತಾಕ್ ಅಲಿ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತೇರ್ಗಡೆಯಾಗಿವೆ.
ಸೋಮವಾರ ನಡೆದ ಅಂತಿಮ ಸೂಪರ್ ಲೀಗ್ ಪಂದ್ಯದಲ್ಲಿ ಬರೋಡಾ ತಂಡ ಆತಿಥೇಯ ಮುಂಬೈ ತಂಡವನ್ನು ಮಣಿಸಿ ನೆಟ್ ರನ್‌ರೇಟ್ ಆಧಾರದಲ್ಲಿ ಫೈನಲ್‌ಗೆ ತಲುಪಿತು. ಮತ್ತೊಂದು ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ದಿಲ್ಲಿಯನ್ನು ಮಣಿಸಿ ಫೈನಲ್‌ಗೆ ತಲುಪಿತು.
ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಎ ಗುಂಪಿನ ರೋಚಕ ಪಂದ್ಯದಲ್ಲಿ 152 ರನ್ ಗುರಿ ಪಡೆದಿದ್ದ ಬರೋಡಾ 19.1 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಟ್ವೆಂಟಿ-20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್(57) ಅರ್ಧಶತಕದ ನೆರವಿನಿಂದ ಮುಂಬೈ ತಂಡ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು.
2011-12 ಹಾಗೂ 2013-14ರಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದ ಬರೋಡಾ ತಂಡ ಮೂರನೆ ಬಾರಿ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.
ಮತ್ತೊಂದೆಡೆ, ಉತ್ತರ ಪ್ರದೇಶ ತಂಡ ದಿಲ್ಲಿಯನ್ನು 2 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್‌ಗಳಿಂದ ಮಣಿಸಿತು. ಇದು ಉತ್ತರ ಪ್ರದೇಶದ ಹ್ಯಾಟ್ರಿಕ್ ಗೆಲುವಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ದಿಲ್ಲಿ ಉನ್ಮುಕ್ತ್ ಚಂದ್(48) ನೆರವಿನಿಂದ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಏಕಲವ್ಯ ದ್ವಿವೇದಿ ಅವರು ಅಜೇಯ 49 ರನ್ ನೆರವಿನಿಂದ ಉತ್ತರ ಪ್ರದೇಶ ತಂಡ 19.4 ಓವರ್‌ಗಳಲ್ಲಿ 159 ರನ್ ಗಳಿಸಿತು.







