ಇರಾನ್ ಎಫ್‌ಬಿಐ ಏಜಂಟನ್ನು ಬಿಡುವವರೆಗೆ ವಿರಮಿಸುವುದಿಲ್ಲ: ಅಮೆರಿಕ ಘೋಷಣೆ
ವಾಶಿಂಗ್ಟನ್, ಜ. 18: ಇರಾನ್‌ನಲ್ಲಿ ಬಂಧನದಲ್ಲಿದ್ದ ಅಮೆರಿಕದ ಐವರು ನಾಗರಿಕರು ಕಳೆದ ವಾರಾಂತ್ಯದಲ್ಲಿ ಬಿಡುಗಡೆಗೊಂಡಿರುವಂತೆಯೇ, ಒಂಬತ್ತು ವರ್ಷಗಳಿಂದ ಕಾಣೆಯಾಗಿರುವ ತನ್ನ ಇನ್ನೋರ್ವ ಪ್ರಜೆಯ ಬಿಡುಗಡೆಗಾಗಿ ದಣಿವರಿಯದೆ ಕೆಲಸ ಮಾಡುವುದಾಗಿ ಅಮೆರಿಕ ಸರಕಾರ ರವಿವಾರ ಘೋಷಿಸಿದೆ.
ಮಾಜಿ ಎಫ್‌ಬಿಐ ಏಜಂಟ್ ರಾಬರ್ಟ್ ಲೆವಿನ್ಸನ್ 2007 ಮಾರ್ಚ್‌ನಲ್ಲಿ ಇರಾನ್‌ನ ದ್ವೀಪ ಕಿಶ್‌ಗೆ ಭೇಟಿ ನೀಡಿದ್ದಾಗ ನಿಗೂಢ ಸನ್ನಿವೇಶಗಳ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದರು. ಅವರು ಆ ವಲಯದಲ್ಲಿನ ನಕಲಿ ಸಿಗರೆಟ್ ಜಾಲದ ಬಗ್ಗೆ ತನಿಖೆ ನಡೆಸುತ್ತಿದ್ದರು ಎನ್ನಲಾಗಿದೆ.
67 ವರ್ಷದ ಲೆವಿನ್ಸನ್ ಈಗಲೂ ಜೀವಂತವಾಗಿದ್ದರೆ, ಅಮೆರಿಕದ ಇತಿಹಾಸದಲ್ಲೇ ಅತಿ ದೀರ್ಘ ಕಾಲ ಬಂಧನದಲ್ಲಿದ್ದ ಒತ್ತೆಯಾಳು ಎಂಬುದಾಗಿ ಪರಿಗಣಿಸಲ್ಪಡುತ್ತಾರೆ.
‘‘ಇತರರ ವಾಪಸಾತಿಯ ಬಗ್ಗೆ ನಾವು ಹರ್ಷಿತರಾಗಿರುವ ಜೊತೆಗೇ, ಲೆವಿನ್ಸನ್‌ರನ್ನು ನಾವು ಯಾವತ್ತೂ ಮರೆಯುವುದಿಲ್ಲ’’ ಎಂದು ಶ್ವೇತಭವನದಲ್ಲಿ ಮಾಡಿದ ಭಾಷಣದಲ್ಲಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದರು.
‘‘ಪ್ರತಿ ದಿನ, ಅದರಲ್ಲೂ ವಿಶೇಷವಾಗಿ ಇಂದು ನಮ್ಮ ಹೃದಯಗಳು ಲೆವಿನ್ಸನ್ ಕುಟುಂಬದ ಜೊತೆಗೆ ಇದೆ. ಅವರ ಕುಟುಂಬ ಮತ್ತೆ ಒಂದಾಗುವವರೆಗೆ ನಾವು ವಿರಮಿಸುವುದಿಲ್ಲ’’ ಎಂದು ಅವರು ಘೋಷಿಸಿದರು.
ಅವರ ಇರುವಿಕೆಯ ಬಗ್ಗೆ ಮಾಹಿತಿ ನೀಡುವವರಿಗೆ 50 ಲಕ್ಷ ಡಾಲರ್ (ಸುಮಾರು 33 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿ ಎಫ್‌ಬಿಐ ಘೋಷಿಸಿದೆ.





