ಲುಧಿಯಾನ: ಆರೆಸ್ಸೆಸ್ ಶಾಖೆಯಲ್ಲಿ ಗುಂಡಿನ ಸದ್ದು
ಲುಧಿಯಾನ, ಜ.18: ನವ ಕಿದ್ವಾಯಿನಗರ ಪಾರ್ಕ್‌ನಲ್ಲಿ ಆರೆಸ್ಸೆಸ್ ಶಾಖೆಯೊಂದರಲ್ಲಿ ಸಿಡಿದ ಗುಂಡಿನ ಸದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ಆದರೆ, ಮೈದಾನ ಖಾಲಿಯಿದ್ದುದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಮೋಟಾರ್ ಸೈಕಲ್ ಸವಾರರು, ಸಂಘದ ಸ್ವಯಂ ಸೇವಕರು ಒಟ್ಟು ಸೇರುವ ಮೊದಲೇ ಶಾಖೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಎರಡು ಗುಂಡುಗಳ ಶಬ್ದ ಕೇಳಿಸಿತ್ತೆಂದು ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದಾರೆ. ದುಷ್ಕರ್ಮಿಗಳು ಮಂಕಿ ಕ್ಯಾಪ್ ಧರಿಸಿದ್ದುದರಿಂದ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲವೆಂದು ಪೊಲೀಸರು ವಿವರಿಸಿದ್ದಾರೆ.
ಮಾಹಿತಿ ತಿಳಿದೊಡನೆಯೇ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು. ಸಂಘದ ಸ್ವಯಂ ಸೇವಕರು ಆ ವೇಳೆ ಅಲ್ಲಿ ಸೇರದಿದ್ದ ಕಾರಣ ಯಾರಿಗೂ ಗಾಯಗಳಾಗಿಲ್ಲವೆಂದು ಡಿಸಿಪಿ ನರೀಂದರ್ ಭಾರ್ಗವ ತಿಳಿಸಿದ್ದಾರೆ. 1991ರ ಮೇಯಲ್ಲಿ ದ್ರೇಸಿ ಮೈದಾನದ ಆರೆಸ್ಸೆಸ್ ಶಾಖೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಐವರು ಸ್ವಯಂ ಸೇವಕರನ್ನು ಕೊಂದು, ಇತರ 15 ಮಂದಿಯನ್ನು ತೀವ್ರವಾಗಿ ಗಾಯಗೊಳಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಇದೇ ವೇಳೆ, ಪೊಲೀಸರು ಇಬ್ಬರು ಅಜ್ಞಾತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆ. 307(ಹತ್ಯಾಯತ್ನ), 336 (ಇತರರ ಜೀವ ಹಾಗೂ ವೈಯಕ್ತಿಕ ಸುರಕ್ಷೆಗೆ ಅಪಾಯವೊಡ್ಡುವುದು) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆ. 25/27ರನ್ವಯ ಪ್ರಕರಣ ದಾಖಲಿಸಿದ್ದಾರೆ.





