ಅರುಣಾ ರಾಯ್ ಮೇಲೆ ಹಲ್ಲೆಗೆ ಮಹಿಳಾ ಒಕ್ಕೂಟ ಖಂಡನೆ
ಬೆಂಗಳೂರು, ಜ. 18: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಲೇಖಕಿ ಹಾಗೂ ಎನ್‌ಎಫ್‌ಐಡಬ್ಲ್ಯು ರಾಷ್ಟ್ರೀಯ ಅಧ್ಯಕ್ಷೆ ಅರುಣಾ ರಾಯ್ ಮತ್ತವರ ಸಂಗಾತಿಗಳ ಮೇಲೆ ಜನಾಂದೋಲನದ ಸಂದರ್ಭದಲ್ಲಿ ರಾಜಸ್ತಾನದ ಬಿಜೆಪಿ ಶಾಸಕ ಮತ್ತವರ ಸಹಚರರು ನಡೆಸಿರುವ ಹಲ್ಲೆಯನ್ನು ಭಾರತೀಯ ಮಹಿಳಾ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ರಾಯ್ ಅವರು ತಮ್ಮ ಎಂಕೆಎಸ್‌ಎಸ್ ತಂಡದೊಂದಿಗೆ ಸರಕಾರದ ಉತ್ತರದಾಯಿತ್ವದ ಕುರಿತು ಜನಜಾಗೃತಿ ಮೂಡಿಸಲು ತೊಗಲುಗೊಂಬೆಯಾಟ, ಹಾಡುಗಳ ಮೂಲಕ ರಾಜಸ್ತಾನದ ವಿವಿಧ ಜಿಲ್ಲೆಗಳಲ್ಲಿ ಆಂದೋಲನವನ್ನು ಹಮ್ಮಿಕೊಂಡಿದ್ದರು. ಜನತೆಯ ಹಕ್ಕುಗಳಿಗಾಗಿ ನಡೆಯುತ್ತಿದ್ದ ‘ಜವಾಬ್‌ದೇ’ ಯಾತ್ರಾವನ್ನು ಸಹಿಸದ ಬಿಜೆಪಿ ಶಾಸಕ ತಮ್ಮ 40 ಮಂದಿ ಹಿಂಬಾಲಕರನ್ನು ಕಟ್ಟಿಕೊಂಡು ಕಲ್ಲು, ಲಾಠಿಗಳನ್ನು ಹಿಡಿದು ಕಾರ್ಯಕರ್ತರ ಮತ್ತು ಕಾರ್ಯಕರ್ತೆಯರ ಮೇಲೆ ಹಲ್ಲೆಗೈಯುತ್ತಿದ್ದರೂ, ಪೊಲೀಸರು ಸುಮ್ಮನೆ ನಿಂತು ವೀಕ್ಷಿಸಿರುವುದು ದುರಂತ. ಬಿಜೆಪಿ ನಾಯಕರು ತಮ್ಮ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿ ಮತ್ತು ಹೋರಾಟಗಳ ವಿರುದ್ಧದ ತಮ್ಮ ಅಸಹನೆಯ ಮುಖವನ್ನು, ಪಾಳೆಯಗಾರಿ ಸಂಸ್ಕೃತಿಯನ್ನು ಸಾರ್ವಜನಿಕವಾಗಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಪ್ರಜಾಸತ್ತಾತ್ಮಕ ಜನ ಚಳವಳಿ ಮತ್ತು ಹಕ್ಕುಗಳಿಗಾಗಿ ನಡೆಸುವ ಹೋರಾಟಗಳನ್ನು ಬಿಜೆಪಿ ಹತ್ತಿಕ್ಕುತ್ತಿರುವುದು ಸ್ಪಷ್ಟವಾಗಿದೆ.
ಬಿಜೆಪಿ ಆಡಳಿತದಲ್ಲಿ ಪಾರದರ್ಶಕತೆ ನೀಡುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದು ಅನಂತರ ಅದಕ್ಕಾಗಿ ನಡೆಯುವ ಎಲ್ಲ್ಲ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಬಗ್ಗುಬಡಿಯಲು ತನ್ನ ಗೂಂಡಾಪಡೆಯನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿ ಪ್ರಜಾತಂತ್ರ ವಿರೋಧಿ ಮತ್ತು ಜನವಿರೋಧಿ ಧೋರಣೆಯ ಬಗ್ಗೆ ಎನ್‌ಎಫ್‌ಐಡಬ್ಲ್ಯು ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಅಲ್ಲದೆ, ಹಲ್ಲೆಗೈದ ಶಾಸಕ ಮತ್ತವರ ಗೂಂಡಾಪಡೆಯ ಹಾಗೂ ಕರ್ತವ್ಯಭ್ರಷ್ಟ ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಎನ್‌ಎಫ್‌ಐಡಬ್ಲ್ಯು ರಾಜ್ಯಾಧ್ಯಕ್ಷೆ ಎಂ.ಜ್ಯೋತಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







