ಫತೇಪುರ್ ಗಲಭೆ: ಕಟಿಯಾರ್ ಬಂಧನ
ಕಾನ್‌ಪುರ,ಜ.18: ಮಕರಸಂಕ್ರಾಂತಿಯಂದು ನಡೆದ ಶೋಭಾಯಾತ್ರೆಯ ಸಂದರ್ಭದಲ್ಲಿ, ಕೋಮುಗಲಭೆಗೆ ತುತ್ತಾದ ಫತೇಪುರ್ ನಗರವನ್ನು ಸೋಮವಾರ ಪ್ರವೇಶಿಸಲು ಯತ್ನಿಸಿದ ಬಿಜೆಪಿ ನಾಯಕ ವಿನಯ್ ಕಟಿಯಾರ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಟಿಯಾರ್ ಅವರನ್ನು ಸರಕಾರಿ ಅತಿಥಿಗೃಹಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಂದ ಅವರನ್ನು ಲಕ್ನೋಗೆ ಕಳುಹಿಸಲಾಗುವುದು ಎಂದು ಕಾನ್‌ಪುರದ ಹಿರಿಯ ಪೊಲೀಸ್ ಅಧೀಕ್ಷಕ ಶಲಭ್ ಮಾಥುರ್ ತಿಳಿಸಿದ್ದಾರೆ.ಕಟಿಯಾರ್ ಬಂಧನದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ, ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಂಧನಕ್ಕೆ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಕಟಿಯಾರ್, ಫತೇಪುರ್ ಕೋಮುಗಲಭೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.
ಜನವರಿ 14ರಂದು ಮಕರಸಂಕ್ರಾಂತಿಯ ಶೋಭಾಯಾತ್ರೆಯ ವೇಳೆ ಫತೇಪುರದ ಖಾಝಿಪುರ ಕಸೌಲಿ ಪ್ರದೇಶದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಭುಗಿಲೆದ್ದ ಬಳಿಕ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.
Next Story





