ಮಾನನಷ್ಟ ಕೇಸ್ :ಕರುಣಾನಿಧಿ ಕೋರ್ಟ್‌ಗೆ ಹಾಜರು

ಹೊಸದಿಲ್ಲಿ,ಜ.18: ತನ್ನ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ, ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಸೋಮವಾರ ನಗರದ ನ್ಯಾಯಾಲಯದಲ್ಲಿ ಹಾಜರಾದರು.
ಗಾಲಿಕುರ್ಚಿಯಲ್ಲಿ ಕುಳಿತುಕೊಂಡಿದ್ದ ಕರುಣಾ ನಿಧಿಯವರ ಹೇಳಿಕೆಯನ್ನು, ಪ್ರಧಾನ ಸೆಶನ್ಸ್ ನ್ಯಾಯಾಧೀಶ ಎನ್. ಆದಿನಾಥನ್ ದಾಖಲಿಸಿಕೊಂಡರು. ಪ್ರಕರಣದ ಮುಂದಿನ ಅಲಿಕೆಯನ್ನು ಅವರು ಮಾರ್ಚ್ 10ಕ್ಕೆ ಮುಂದೂಡಿದರು.
ಕರುಣಾನಿಧಿ ಪುತ್ರ, ಪಕ್ಷದ ಖಜಾಂಚಿ ಎಂ.ಕೆ.ಸ್ಟಾಲಿನ್, ರಾಜ್ಯಸಭಾ ಸಂಸದೆ ಕನಿಮೋಳಿ,ಹಿರಿಯ ಡಿಎಂಕೆ ನಾಯಕರಾದ ಟಿ.ಆರ್.ಬಾಲು, ದಯಾನಿಧಿ ಮಾರನ್, ದೊರೈಮುರುಗನ್ ಮತ್ತಿತರರು ಜೊತೆಗಿದ್ದರು.
ಕರುಣಾನಿಧಿ ಆಗಮನದ ವೇಳೆ ನ್ಯಾಯಾಲಯದ ಆವರಣದಲ್ಲಿ 1500ಕ್ಕೂ ಅಧಿಕ ಡಿಎಂಕೆ ಕಾರ್ಯಕರ್ತರು ಜಮಾಯಿಸಿದ್ದು,ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಕಳೆದ ನವೆಂಬರ್‌ನಲ್ಲಿ ಡಿಎಂಕೆಯ ಮುಖವಾಣಿ ಮುರಸೋಳಿ ಪತ್ರಿಕೆಯಲ್ಲಿ, ಜಯಾ ಸರಕಾರದ ನಾಲ್ಕು ವರ್ಷಗಳ ಆಡಳಿತವನ್ನು ಟೀಕಿಸಿ ಬರೆದ ಲೇಖನಕ್ಕೆ ಸಂಬಂಧಿಸಿ,ಕರುಣಾನಿಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕರುಣಾನಿಧಿ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.
ನ್ಯಾಯಾಲಯಕ್ಕೆ ಹಾಜರಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಡಿಎಂಕೆ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ರಾಜ್ಯ ಸರಕಾರದ ಬಗ್ಗೆ ಚಕಾರವೆತ್ತಿದರೂ ಮಾನನಷ್ಟ ಮೊಕದ್ದಮೆಗಳನ್ನು ಹೂಡಲಾಗುತ್ತಿದೆಯೆಂದರು.





