‘ಸ್ನೇಹಿತನ ಮೇಲೆ ಗುಂಡಿನ ದಾಳಿ’
ಬೆಂಗಳೂರು, ಜ.18: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರಿಬ್ಬರ ನಡುವಿನ ಗಲಾಟೆಯಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಓರ್ವನ ಸ್ಥಿತಿ ಚಿಂತಾಜನಕವಾಗಿರುವ ಘಟನೆಯು ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿ ಬಡಾವಣೆಯಲ್ಲಿ ನಡೆದಿದೆ.
ಗುಂಡಿನ ದಾಳಿಗೆ ಒಳಗಾಗಿರುವ ವ್ಯಕ್ತಿಯನ್ನು ಮಧ್ಯಪ್ರದೇಶ ಮೂಲದ ಬಿನೋದ್ ಎಂದು ಗುರುತಿಸಲಾಗಿದ್ದು, ಕೃತ್ಯವೆಸಗಿರುವ ಆರೋಪಿ ಮುಖೇಶ್ ನಾಪತ್ತೆಯಾಗಿದ್ದಾನೆ.
ಟೈಲ್ಸ್ ಕೆಲಸ ಮಾಡುತ್ತಿದ್ದ ಬಿನೋದ್ ಶಾಂತಿ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಸ್ನೇಹಿತ ಮುಖೇಶ್‌ನಿಂದ ಬಿನೋದ್ 5 ಸಾವಿರ ರೂ.ಸಾಲವನ್ನು ಪಡೆದಿದ್ದು, ಸಾಲದ ಹಣ ವಾಪಸ್ ಪಡೆಯುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಮುಖೇಶ್ ನಾಲ್ಕು ದಿನಗಳ ಹಿಂದೆಯಷ್ಟೆ ಬಿನೋದ್ ಮನೆಯ ಪಕ್ಕದಲ್ಲೆ ಬಾಡಿಗೆ ಕೊಠಡಿಯೊಂದನ್ನು ಪಡೆದುಕೊಂಡಿದ್ದ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ತನ್ನ ಕೊಠಡಿಗೆ ಬಿನೋದ್‌ನನ್ನು ಕರೆಸಿಕೊಂಡ ಮುಖೇಶ್ ಮೊದಲು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆನಂತರ ಬಂದೂಕಿನಿಂದ ಐದು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯಿಂದಾಗಿ ಬಿನೋದ್‌ನ ಎದೆ ಮತ್ತು ಬೆನ್ನಿನ ಭಾಗದಲ್ಲಿ ಎರಡು ಗುಂಡು ಹೊಕ್ಕಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಗುಂಡಿನ ಶಬ್ದ ಕೇಳಿ ಹೊರಗಡೆ ಬಂದ ನೆರೆ ಮನೆಯವರು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಬಿನೋದ್‌ನನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕ್ಸಿತೆಗಾಗಿ ಬಿನೋದ್‌ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಪುರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







