ದಲಿತ ವಿದ್ಯಾರ್ಥಿಗಳಿಗೆ ವಿಷ, ನೇಣುಹಗ್ಗ ವಿತರಿಸಿ!

ಸೋಮವಾರ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲಾ ಅವರು, ದೌರ್ಜನ್ಯದಿಂದ ಹತಾಶರಾಗಿ ಹೈದರಾಬಾದ್ ವಿ.ವಿ. ಉಪಕುಲಪತಿಗೆ ಬರೆದಿರುವ ಕೊನೆಯ ಪತ್ರ ಇಲ್ಲಿದೆ.
ರಿಗೆ,
ಉಪಕುಲಪತಿ,
ಹೈದರಾಬಾದ್ ವಿ.ವಿ.
ವಿಷಯ: ದಲಿತ ಸಮಸ್ಯೆಗೆ ಪರಿಹಾರ
ಮಾನ್ಯರೆ,
ದಲಿತರ ಬಗ್ಗೆ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ, ಎಬಿವಿಪಿ ಅಧ್ಯಕ್ಷರೊಬ್ಬರನ್ನು ಪ್ರಶ್ನಿಸಿದ್ದಕ್ಕಾಗಿ, ದಲಿತರ ಆತ್ಮಗೌರವದ ಚಳವಳಿಯ ಬಗ್ಗೆ ನೀವು ನೀಡಿದ ‘ಶ್ರದ್ಧಾಪೂರ್ವಕ’ ಹೇಳಿಕೆಗಾಗಿ ಮೊದಲಿಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಈ ವಿಷಯದ ಬಗ್ಗೆ ನೀವು ವೈಯಕ್ತಿಕವಾಗಿ ತೋರಿದ ಆಸಕ್ತಿಯು, ಐತಿಹಾಸಿಕ ಹಾಗೂ ಅಭೂತಪೂರ್ವವಾದುದು. ಐವರು ದಲಿತ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಲ್ಲಿ ‘‘ಸಾಮಾಜಿಕವಾಗಿ ಬಹಿಷ್ಕರಿಸಲಾಗಿದೆ’’. ನಿಮ್ಮ ಬದ್ಧತೆಗಳನ್ನು ಕಾಣುವಾಗ, ಡೋನಾಲ್ಡ್ ಟ್ರಂಪ್ ಕೂಡಾ ಲಿಲಿಪುಟ್‌ನಂತೆ ಭಾಸವಾಗುತ್ತಿರುವುದರಿಂದ, ನಾನು ನೈತಿಕತೆಯ ಸಂಕೇತವಾಗಿ ಎರಡು ಸಲಹೆಗಳನ್ನು ನೀಡಲಿಚ್ಛಿಸುತ್ತೇನೆ. ಈ ಮೂಲಕ ನೀವು ದಲಿತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
1. ಪ್ರವೇಶಾತಿಯ ಸಮಯದಲ್ಲಿ ಎಲ್ಲಾ ದಲಿತ ವಿದ್ಯಾರ್ಥಿಗಳಿಗೆ ದಯವಿಟ್ಟು 10 ಮಿ.ಗ್ರಾಂ. ಸೋಡಿಯಂ ಆಸಿಡ್ ವಿಷವನ್ನು ನೀಡಿರಿ. ಅಂಬೇಡ್ಕರ್ ಓದುತ್ತಿದ್ದಾಗ ಎದುರಿಸಿದ ಪರಿಸ್ಥಿತಿಯೇ ತಮಗಾಗುತ್ತಿದೆಯೆಂಬ ಅನುಭವವಾದಲ್ಲಿ ಅವರು ಅದನ್ನು ಬಳಸಿಕೊಳ್ಳಲಿ.
2. ನಿಮ್ಮ ಸಂಗಡಿಗರಾದ, ಮಹಾನ್ ಮುಖ್ಯ ವಾರ್ಡನ್ ಮೂಲಕ ಎಲ್ಲಾ ದಲಿತ ವಿದ್ಯಾರ್ಥಿಗಳ ಕೊಠಡಿಗೆ ಒಳ್ಳೆಯ ನೇಣು ಹಗ್ಗವನ್ನು ಪೂರೈಕೆ ಮಾಡಿರಿ.
ನಾವು ವಿದ್ವಾಂಸರು, ಪಿಎಚ್‌ಡಿ ವಿದ್ಯಾರ್ಥಿಗಳು ಈಗಾಗಲೇ ಆ ಹಂತವನ್ನು ಹಾದುಹೋಗಿದ್ದೇವೆ ಹಾಗೂ ಈಗಾಗಲೇ ದಲಿತ ಆತ್ಮಗೌರವ ಚಳವಳಿಯ ಸದಸ್ಯರಾಗಿದ್ದೇವೆ. ದುರದೃಷ್ಟವಶಾತ್, ಇಲ್ಲಿಂದ ನಮಗೆ ನಿರ್ಗಮಿಸುವ ಸುಲಭ ಮಾರ್ಗ ತೋಚುತ್ತಿಲ್ಲ.
ಹೀಗಾಗಿ, ಮಹನೀಯರಾದ ತಾವು, ನನ್ನಂತಹ ವಿದ್ಯಾರ್ಥಿಗಳಿಗೆ ‘‘ದಯಾಮರಣ’’ದ ಸೌಲಭ್ಯವನ್ನು ಒದಗಿಸಲು ಸಿದ್ಧತೆಗಳನ್ನು ನಡೆಸುವಂತೆ ನಾನು ನಿಮ್ಮನ್ನು ಕೋರುತ್ತೇನೆ ಮತ್ತು ನಿಮಗೆ ಮತ್ತು ನಿಮ್ಮ ಕ್ಯಾಂಪಸ್‌ಗೆ ಸದಾ ಶಾಂತಿ ದೊರೆಯಲಿ ಎಂದು ಹಾರೈಸುತ್ತೇನೆ.
ಧನ್ಯವಾದಗಳು.
ನಿಮ್ಮ ವಿನಮ್ರ,
ವೇಮುಲ ಆರ್. ಚಕ್ರವರ್ತಿ





