ಕೆಎಸ್ಸಾರ್ಟಿಸಿಗೆ 3 ಸಾವಿರ ಹೊಸ ಬಸ್

ಬೆಂಗಳೂರು, ಜ. 18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಪ್ರಸಕ್ತ ಸಾಲಿನಲ್ಲಿ 3 ಸಾವಿರ ಹೊಸ ಬಸ್ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ-986, ಬಿಎಂಟಿಸಿ-658, ಈಶಾನ್ಯ ಸಾರಿಗೆ-702, ವಾಯವ್ಯ ಸಾರಿಗೆ-310 ಸೇರಿದಂತೆ ಒಟ್ಟು ಮೂರು ಸಾವಿರ ಹೊಸ ಬಸ್ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.
8.5 ಲಕ್ಷ ಕಿ.ಮೀ ದೂರ ಓಡಿಸಿದರೆ ಅಂತಹ ಬಸ್ಸುಗಳನ್ನು ಮತ್ತೆ ಬಳಸುವುದಿಲ್ಲ. ರಾಜ್ಯದಲ್ಲಿ 5.2 ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಬಸ್ಸನ್ನು ಓಡಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ದಿಲ್ಲಿ ಮತ್ತಿತರ ರಾಜ್ಯಗಳಲ್ಲಿ ಹದಿನೈದು ವರ್ಷಗಳಿಗೂ ಮೀರಿದ ವಾಹನಗಳನ್ನು ಓಡಿಸಲಾಗುತ್ತದೆ. ಆದರೆ, ರಾಜ್ಯದಲ್ಲಿ ಹಳೆಯ ವಾಹನಗಳನ್ನು ಓಡಿಸುವುದಿಲ್ಲ ಎಂದು ಹೇಳಿದರು.
ಫಲಕ ಅಳವಡಿಕೆ: ಬಸ್ ನಿಲ್ದಾಣಗಳು ಮತ್ತು ಪ್ರಯಾಣದ ಮಾರ್ಗ ಮಧ್ಯೆದ ಹೊಟೇಲ್‌ಗಳಲ್ಲಿ ತಿಂಡಿ, ಊಟ, ಪಾನಿಯಗಳಿಗೆ ದುಬಾರಿ ದರ ವಸೂಲಿಗೆ ತಡೆಗೆ ಎಲ್ಲ ಕಡೆಗಳಲ್ಲಿ ಫಲಕ ಅಳವಡಿಸಲಾಗುವುದೆಂದ ಅವರು, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮಾರಾಟ ಹಾಗೂ ದುಬಾರಿ ದರ ವಸೂಲಿಗೆ ಹೆಚ್ಚಿನ ದಂಡ ವಿಧಿಸಲಾಗುವುದೆಂದು ಎಚ್ಚರಿಸಿದರು.
ಪ್ರಯಾಣ ದರ ಇಳಿಕೆ ಪ್ರಸ್ತಾವ ಇಲ್ಲ
ಡೀಸೆಲ್ ಬೆಳೆ ಇಳಿಕೆ ಆಗಿದ್ದರೂ ಬಸ್ ಪ್ರಯಾಣ ದರ ಇಳಿಕೆಯ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ. ಉದ್ಯೋಗಿಗಳಿಗೆ ಶೇ.11ರಷ್ಟು ವೇತನ ಹೆಚ್ಚಳ ಮಾಡಿದ್ದು, ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಉಳಿದ ಮೊತ್ತ ಬಳಕೆ ಮಾಡಲಾಗುತ್ತಿದೆ. ಸಂಸ್ಥೆಯ ಶೇ.42ರಷ್ಟು ಬಸ್‌ಗಳು ನಷ್ಟದಲ್ಲಿದ್ದರೂ, ಪ್ರಯಾಣಿಕರ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಸಂಚರಿಸಬೇಕಾಗಿವೆ.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ







