ಹೈದರಾಬಾದ್‌ನ ಕೇಂದ್ರ ವಿವಿ: ಹತ್ತು ವರ್ಷಗಳಲ್ಲಿ 9 ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ

ಹೈದರಾಬಾದ್, ಜ.19: ಹೈದರಾಬಾದ್‌ನ ಕೇಂದ್ರ ವಿವಿ ಆವರಣದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 9 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೆಮುಲಾ ಈ ಪಟ್ಟಿಗೆ ಹೊಸ ಸೇರ್ಪಡೆ. ಈ ಹಿಂದೆ ಆತ್ಮಹತ್ಯೆಗೈದ ಎಂಟು ವಿದ್ಯಾರ್ಥಿಗಳು ವಿವಿಯಲ್ಲಿ ಜಾತಿ ಆಧಾರಿತ ತಾರತಮ್ಯ ವ್ಯವಸ್ಥೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇಷ್ಟರ ತನಕ ನಡೆದಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಪೋಲೀಸ್ ಕಡತಗಳಲ್ಲಿ ಸೇರ್ಪಡೆಗೊಂಡು ಅನಂತರ ಅದು ಮುಚ್ಚಿ ಹೊಗುತ್ತಿತ್ತು.
ರೋಹಿತ್ ವೆಮುಲಾ ಪ್ರಕರಣ ಮುಚ್ಚಿ ಹೋಗಿದ್ದ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಮರುಜೀವ ನೀಡಿದೆ. 2013ರಲ್ಲಿ ಸಂಶೋಧನಾ ವಿದ್ಯಾರ್ಥಿ ಎಂ. ವೆಂಕಟೀಶ್ ದಲಿತ ವಿದ್ಯಾರ್ಥಿಗಳ ತಾರತಮ್ಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
2008ರಲ್ಲಿ ಭೌತಶಾಸ್ತ್ರದ ಸಂಶೋಧನಾ ವಿದ್ಯಾರ್ಥಿ ಸೆಂಥಿಲ್ ಕುಮಾರ್ ತನಗೆ ಫೆಲೋಶಿಪ್ ಹಣಕ್ಕೆ ವಿವಿ ಕತ್ತರಿ ಹಾಕಿದ ಕಾರಣಕ್ಕಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ,





