ಆಸ್ಟ್ರೇಲಿಯನ್ ಓಪನ್: ಮೊದಲ ಸುತ್ತಿನಲ್ಲೇ ನಡಾಲ್ ನಿರ್ಗಮನ

ಮೆಲ್ಬೋರ್ನ್, ಜ.19: ಐದನೆ ಶ್ರೇಯಾಂಕದ ಸ್ಪೇನ್‌ನ ಆಟಗಾರ ರಫೆಲ್ ನಡಾಲ್ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
2009ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನಡಾಲ್‌ಗೆ ಅವರದೇ ದೇಶದ ಫೆರ್ನಾಂಡೊ ವೆರ್ಡಾಸ್ಕೊ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 7-6(8/6), 4-6, 3-6, 7-6(7/4), 6-2 ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು. ನಾಲ್ಕು ಗಂಟೆ, 41 ನಿಮಿಷಗಳ ಹೋರಾಟದಲ್ಲಿ ಫೆರ್ನಾಂಡೊ ಮಹತ್ವದ ಗೆಲುವು ಒಲಿಸಿಕೊಂಡರು. 14 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿರುವ ನಡಾಲ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಎರಡನೆ ಬಾರಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು. 29ರ ಹರೆಯದ ನಡಾಲ್ 2014ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದರು. 2009ರ ಆಸ್ಟ್ರೇಲಿಯನ ಓಪನ್‌ನ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ಎಡಗೈ ಆಟಗಾರರಾದ ನಡಾಲ್ ಹಾಗೂ ಫೆರ್ನಾಂಡೊ ಮುಖಾಮುಖಿಯಾಗಿದ್ದರು. ಆಗ 5 ಗಂಟೆ, 14 ನಿಮಿಷಗಳ ಕಾಲ ನಡೆದಿದ್ದ ಪಂದ್ಯದಲ್ಲಿ ನಡಾಲ್ ಪಂದ್ಯ ಜಯಿಸಿ ಫೈನಲ್‌ಗೆ ತಲುಪಿದ್ದರು. ಆ ವರ್ಷ ಪ್ರಶಸ್ತಿಯನ್ನು ಜಯಿಸಿದ್ದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಅಲೆಕ್ಸಾಂಡರ್ ಝ್ವೆರೆವಾರನ್ನು 6-1, 6-2, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.
ವೀನಸ್, ಸಿಮೊನಾಗೆ ಸೋಲು:
ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಹಾಗೂ ರೋಮಾನಿಯದ ಎರಡನೆ ಶ್ರೇಯಾಂಕಿತೆ ಸಿಮೊನಾ ಹಾಲೆಪ್ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲೇ ಸೋತಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ವೀನಸ್ ಅವರು ಬ್ರಿಟನ್‌ನ ಜೋಶನ್ನ ಕಾಂಟಾ ವಿರುದ್ಧ 6-4, 6-2 ಸೆಟ್‌ಗಳ ಅಂತರದಿಂದ ಶರಣಾದರು. ಈ ಮೂಲಕ 35ನೆ ಹರೆಯದಲ್ಲಿ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಟ್ರೋಫಿ ಜಯಿಸುವ ವೀನಸ್ ಕನಸು ಭಗ್ನವಾಯಿತು. 7 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವೀನಸ್ ಆಸ್ಟ್ರೇಲಿಯ ಸಂಜಾತೆ ಕಾಂಟಾ ವಿರುದ್ಧ ಕೇವಲ 79 ನಿಮಿಷಗಳಲ್ಲಿ ಸೋಲುಂಡಿದ್ದಾರೆ.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸಿಮೊನಾ ಹಾಲೆಪ್ ಚೀನಾದ ಝಾಂಗ್ ಶುಐ ವಿರುದ್ಧ 6-4, 6-3 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಇವಾನೊವಿಕ್ ಶುಭಾರಂಭ: ಇದೇ ವೇಳೆ ಸರ್ಬಿಯದ ಟೆನಿಸ್ ಸ್ಟಾರ್, ವಿಶ್ವದ ಮಾಜಿ ನಂ.1 ಆಟಗಾರ್ತಿ ಅನಾ ಇವಾನೊವಿಕ್ ಆಸ್ಟ್ರೇಲಿಯದ ವೈರ್ಲ್ಡ್ ಕಾರ್ಡ್ ಆಟಗಾರ್ತಿ ಟಮ್ಮಿ ಪ್ಯಾಟರ್ಸನ್‌ರನ್ನು 6-2, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. 2008ರ ಆಸ್ಟ್ರೇಲಿಯನ್ ಓಪನ್ ರನ್ನರ್ಸ್‌ಅಪ್ ಇವಾನೊವಿಕ್ ಕೇವಲ ಒಂದು ಗಂಟೆಯೊಳಗೆ ಪಂದ್ಯವನ್ನು ಜಯಿಸಿ ಮುಂದಿನ ಸುತ್ತಿಗೆ ತೇರ್ಗಡೆಯಾದರು. 2ನೆ ಸುತ್ತಿನಲ್ಲಿ ಅನಸ್ಟಸಿಜಾ ಸೆವಾಸ್ಟೋವಾರನ್ನು ಎದುರಿಸಲಿದ್ದಾರೆ.
ಹೆವಿಟ್, ವಾವ್ರಿಂಕಗೆ ಗೆಲುವು
ನಿವೃತ್ತಿಯ ಅಂಚಿನಲ್ಲಿರುವ ಆಸ್ಟ್ರೇಲಿಯದ ಹಿರಿಯ ಆಟಗಾರ ಲೆಟನ್ ಹೆವಿಟ್, ಫ್ರೆಂಚ್ ಓಪನ್ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೆ ಸುತ್ತಿಗೆ ತಲುಪಿದ್ದಾರೆ. ತವರು ನೆಲದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ದಾಖಲೆ 20ನೆ ಹಾಗೂ ಕೊನೆಯ ಬಾರಿ ಆಡುತ್ತಿರುವ 34ರ ಹರೆಯದ ಹೆವಿಟ್ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ಜೇಮ್ಸ್ ಡಕ್‌ವರ್ತ್‌ರನ್ನು 7-6(5), 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಸ್ವಿಸ್ ಆಟಗಾರ ವಾವ್ರಿಂಕ ಎದುರಾಳಿ ರಶ್ಯದ ಆಟಗಾರ ಡಿಮಿಟ್ರಿ ಟರ್ಸುನೊವ್ ಗಾಯದ ಸಮಸ್ಯೆಯಿಂದ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಮುಂದಿನ ಸುತ್ತಿಗೇರಿದರು. ಡಿಮಿಟ್ರಿ ಗಾಯಾಳು ನಿವೃತ್ತಿಯಾದಾಗ ವಾವ್ರಿಂಕ 7-6(2), 6-3 ಸೆಟ್‌ಗಳ ಅಂತರದಿಂದ ಮುನ್ನಡೆಯಲ್ಲಿದ್ದರು.







