ಕದ್ರಿಯಲ್ಲಿ ಸಿದ್ಧಗೊಳ್ಳುತ್ತಿರುವ ತರಕಾರಿ ತೋಟ

ಮಂಗಳೂರು.ಜ, 19:ನಗರದ ಕದ್ರಿ ಉದ್ಯಾನವನದಲ್ಲಿ ಈ ಬಾರಿ ಫಲ ಪುಷ್ಪ ಪ್ರದರ್ಶನ ದಲ್ಲಿ ಕುಂಡದಲ್ಲಿ ಬೆಳೆದಿರುವ ತರಕಾರಿ ಗಿಡಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ.ನಗರದಲ್ಲಿ ತಾರಸಿ ತೋಟಗಳ ನಿರ್ಮಾಣದ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಈ ಬಾರಿಯ ಪ್ರದರ್ಶನದಲ್ಲಿ ಮನೆಯ ಆವರಣದಲ್ಲಿ ,ಕುಂಡಗಳಲ್ಲಿ ,ಪ್ಲಾಸ್ಟಿಕ್ ಚೀಲಗಳಲ್ಲಿ ಟೆರೇಸಿನ ಮೇಲ್ಭಾಗದಲ್ಲಿ ಬೆಳೆಯ ಬಹುದಾದ ತರಕಾರಿ ಗಿಡಗಳನ್ನು ತೋಟಗಾರಿಕಾ ಇಲಾಖೆಯವರು ಕಳೆದ ಮೂರು ತಿಂಗಳ ತಯಾರಿಯ ನಂತರ ಈಗ ಪ್ರದರ್ಶನಕ್ಕೆ ಸಿದ್ದಗೊಳಿಸಿದ್ದಾರೆ.ಜ.23ರಿಂದ 26ರವರೆಗೆ ಕದ್ರಿ ಉದ್ಯಾನವನದಲ್ಲಿ ಈ ತರಕಾರಿ ತೋಟದ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.
ಈ ಬಾರಿ ಫಲ ಪುಷ್ಪ ಪ್ರದರ್ಶನದಲಿ ಎರಡು ರೀತಿಯ ಬೆಂಡೆ ,ಸುಮಾರು ಐದು ತಳಿಯ ಬದನೆ,ಅಲಸಂಡೆ,ಹಸಿರು-ನೇರಳೆಹಾಗೂ ನೆಲ ಬಸಳೆ,ತೊಂಡೆಕಾಯಿ,ಹಾಗಲ ಕಾಯಿ,ಪಡುವಲ ಕಾಯಿ,ಕುಂಬಳ ಕಾಯಿ,ಸೌತೆ ಕಾಯಿ,ಮುಳ್ಳು ಸೌತೆ,ಟೊಮೆಟೋ,ಮೆಣಸು ,ದೊಣ್ಣೆ ಮೆಣಸು,ಪಾಲಕ್ ಸೊಪ್ಪು ,ಕೊತ್ತಂಬರಿ ಸೊಪ್ಪು,ಹರಿವೆ ಸೊಪ್ಪು,ಹೀರೆಕಾಯಿಚಪ್ಪರ,ಚೌಳಿಕಾಯಿ, ಹೂ ಕೋಸು,ನವಿಲು ಕೋಸು,ಎಲೆಕೋಸು ಮೊದಲಾದ ಸುಮಾರು 70ರಿಂದ 80ರಷ್ಟು ತರಕಾರಿಗಳ ಪ್ರದರ್ಶನ ಈ ಬಾರಿ ನಡೆಯಲಿದೆ .ಮನೆಯ ಆವರಣದಲ್ಲಿ ಕೈ ತೋಟ ಹಾಗೂ ಟೆರೇಸ್ ಗಾರ್ಡನ್ ಮೂಲಕ ತರಕಾರಿ ಬೆಳೆಯುವವರಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಫಲಪುಷ್ಟ ಪ್ರದರ್ಶನ ಪ್ರೇರಣೆಯಾಗಬಹುದು .ಈ ಬಾರಿ ಕದ್ರಿ ಉದ್ಯಾನವನದಲ್ಲಿ 60 ಬಗೆಯ ಔಷಧೀಯ ಸಸ್ಯಗಳು ಹಾಗೂ 250 ಜಾತಿಯ ಗಿಡಗಳನ್ನು ಉದ್ಯಾನವನದಲ್ಲಿ ಬೆಳೆಸಿರುವ ಕಾರಣ ಕರಾವಳಿ ಉತ್ಸವದ ಸಂದರ್ಭದಲ್ಲಿ ನಗರಕ್ಕೆ ಭೇಟಿ ನೀಡುವವರಿಗೆ ಈ ಗಿಡಗಳನ್ನು ವೀಕ್ಷಿಸುವ ಅವಕಾಶವಿದೆ ಎಂದು ತೋಟಗಾರಿಕಾಇಲಾಖೆಯ ಉಪನಿರ್ದೇಶಕ ಯೋಗೇಶ್ ಎಚ್.ಆರ್ ವಾರ್ತಾಭಾರತಿಗೆ ತಿಳಿಸಿದ್ದಾರೆ.ತರಕಾರಿ ತೋಟದ ಕೆಲಸದಲ್ಲಿ ನಿರತರಾಗಿರುವ ಸಿಬ್ಬಂದಿಗಳ ಪ್ರಕಾರ ಕನಿಷ್ಠ ಮೂರು ತಿಂಗಳು ಈ ರೀತಿ ತರಕಾರಿ ಗಿಡಗಳನ್ನು ಬೆಳೆಸಲು ಶ್ರಮಪಡಬೇಕಾಗಿದೆ ಕೆಲವು ತರಕಾರಿಗಳು ಬೆಳೆ ಬರಬೇಕಾದರೆ ಕನಿಷ್ಠ ನಾಲ್ಕು ತಿಂಗಳು ಬೇಕಾಗುತ್ತದೆ.ನಾಲ್ಕು ತಿಂಗಳಲ್ಲಿ ನಿರಂತರ ನೀರು,ಗೊಬ್ಬರ ನೀಡುತ್ತಾ ಬಂದರೆ ತರಕಾರಿ ಬೆಳೆ ತೆಗೆಯ ಬಹುದು ಎಂದು ತೋಟದ ನಿರ್ವಹಣೆಯಲ್ಲಿ ನಿರತರಾಗಿರುವ ಸಿಬ್ಬಂದಿ ಪಾಂಡುರಂಗ ಅಭಿಪ್ರಾಯ ಪಡುತ್ತಾರೆ.
ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಕರಾವಳಿಯ ಯಕ್ಷಗಾನ ಸೇರಿದಂತೆ ಕದ್ರಿ ಉದ್ಯಾನವನದಲ್ಲಿ ವೀಣೆ ,ತಬಲ ಮೊದಲಾದ ಕಲಾಪರಿಕರಗಳ ಎಂಟು ಮಾದರಿಗಳನ್ನು ಹೂ ಹಾಗೂ ಪುಷ್ಪ ಕುಂಡಗಳ ಜೋಡಣೆಯೊಂದಿಗೆ ನಿರ್ಮಿಸಲಾಗುವುದು.ಬೊನ್ಸಾಯಿ ಗಿಡಗಳು,ಇತರ ಹೂವಿನ ಹಾಗೂ ಹಣ್ಣಿನ ಗಿಡಗಳ ಪ್ರದರ್ಶನ,ಯಕ್ಷಗಾನಕ್ಕೆ ಪುಷ್ಪ ಕಲಾಕೃತಿ ಈ ಬಾರಿಯ ವಿಶೇಷ ಆಕರ್ಷಣೆ.ಇದರ ನಿರ್ಮಾಣಕ್ಕಾಗಿ ಸುಮಾರು 25 ಸಾವಿರ ಗುಲಾಬಿ,ಜರ್ಬೇರಾ,ಜೆರಿನಿಯಮ್ ಮೊದಲಾದ ಹೂಗಳಿಂದ ನಿರ್ಮಿಸಲಾಗುವುದು ಎಂದು ಯೋಗೇಶ್ ಎಚ್.ಆರ್.ತಿಳಿಸಿದ್ದಾರೆ.










