ಭಾರತ ವಿರುದ್ಧದ ಟ್ವೆಂಟಿ-20 ಸರಣಿಗೆ ಆಸ್ಟ್ರೇಲಿಯ ತಂಡ ಪ್ರಕಟ: ವ್ಯಾಟ್ಸನ್, ಟೇಟ್ ವಾಪಸ್

ಕ್ಯಾನ್‌ವೆರಾ, ಜ.19: ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಭಾರತ ವಿರುದ್ಧದ ಟ್ವೆಂಟಿ-20 ಸರಣಿಗೆ ಮಂಗಳವಾರ ತಂಡವನ್ನು ಪ್ರಕಟಿಸಿದ್ದು, ಹೊಸ ಮುಖಗಳಾದ ಟ್ರೆವಿಸ್ ಹೆಡ್ ಹಾಗೂ ಆ್ಯಂಡ್ರೂ ಟೈ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಿರಿಯ ಆಟಗಾರರಾದ ಶೇನ್ ವ್ಯಾಟ್ಸನ್ ಹಾಗೂ ಶಾನ್ ಟೇಟ್ ತಂಡಕ್ಕೆ ವಾಪಸಾಗಿದ್ದಾರೆ. ‘‘ಶಾನ್ ಟೇಟ್ ಪ್ರಸ್ತುತ ಆಸ್ಟ್ರೇಲಿಯದಲ್ಲಿ ಅತ್ಯಂತ ವೇಗದ ಬೌಲರ್ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಅಪಾರ ಅನುಭವ ಹಾಗೂ ದೇಶೀಯ ಟ್ವೆಂಟಿ-20 ಟೂರ್ನಿ ಬಿಬಿಎಲ್‌ನಲ್ಲಿ ನೀಡಿರುವ ಉತ್ತಮ ಪ್ರದರ್ಶನವನ್ನು ಆಧರಿಸಿ ವ್ಯಾಟ್ಸನ್‌ರನ್ನು ಆಯ್ಕೆ ಮಾಡಿದ್ದೇವೆ’’ಎಂದು ರಾಷ್ಟ್ರೀಯ ಆಯ್ಕೆಗಾರ ರಾಡ್ನೆ ಮಾರ್ಷ್ ಹೇಳಿದ್ದಾರೆ.
ಆಸ್ಟ್ರೇಲಿಯ ತಂಡ ಜ.26 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯ ಈ ಸರಣಿಯನ್ನು ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ತಾಲೀಮು ಪಂದ್ಯವಾಗಿ ಬಳಸಿಕೊಳ್ಳಲು ಯೋಜನೆ ಹಾಕಿಕೊಂಡಿದೆ.
ಇದೇ ವೇಳೆ, ಡೇವಿಡ್ ವಾರ್ನರ್ ಹಾಗೂ ನಥನ್ ಲಿಯೊನ್ ಭಾರತ ವಿರುದ್ಧದ ನಾಲ್ಕನೆ ಹಾಗೂ ಐದನೆ ಏಕದಿನ ಪಂದ್ಯಕ್ಕೆ ತಂಡಕ್ಕೆ ಮರಳಿದ್ದಾರೆ. ಈ ಇಬ್ಬರಿಗೆ ಉಸ್ಮಾನ್ ಖ್ವಾಜಾ ಹಾಗೂ ಜೊಯೆಲ್ ಪ್ಯಾರಿಸ್ ಸ್ಥಾನ ತೆರವುಗೊಳಿಸಲಿದ್ದಾರೆ.
ಆಸ್ಟ್ರೇಲಿಯದ ಟ್ವೆಂಟಿ-20 ತಂಡ:
ಆ್ಯರೊನ್ ಫಿಂಚ್(ನಾಯಕ), ಸ್ಕಾಟ್ ಬೊಲೆಂಡ್, ಕ್ಯಾಮರೂನ್ ಬೊಯ್ಸಾ, ಜೇಮ್ಸ್ ಫಾಕ್ನರ್, ಜಾನ್ ಹೇಸ್ಟಿಂಗ್ಸ್, ಟ್ರೆವಿಸ್ ಹೆಡ್, ನಥನ್ ಲಿಯೊನ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಶಾನ್ ಮಾರ್ಷ್, ಕೇನ್ ರಿಚರ್ಡ್‌ಸನ್, ಸ್ಟೀವನ್ ಸ್ಮಿತ್, ಶಾನ್ ಟೇಟ್, ಆಂಡ್ರೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಹಾಗೂ ಶೇನ್ ವ್ಯಾಟ್ಸನ್. ..........







