ಇರಾನ್ ಬೊಕ್ಕಸಕ್ಕೆ ನಿರ್ಬಂಧಮುಕ್ತ 3,200 ಕೋಟಿ ಡಾಲರ್
ಟೆಹರಾನ್, ಜ. 19: ಜಾಗತಿಕ ದಿಗ್ಬಂಧನಗಳು ತೆರವುಗೊಂಡ ಹಿನ್ನೆಲೆಯಲ್ಲಿ, ಮುಟ್ಟುಗೋಲು ತೆರವುಗೊಂಡ 3,200 ಕೋಟಿ ಡಾಲರ್‌ವೌಲ್ಯದ ಸೊತ್ತುಗಳನ್ನು ಇರಾನ್ ಪಡೆಯಲಿದೆ ಎಂದು ಇರಾನ್ ಸೆಂಟ್ರಲ್ ಬ್ಯಾಂಕ್‌ನ ಮುಖ್ಯಸ್ಥ ವಲಿಯುಲ್ಲ ಸೈಫ್ ಮಂಗಳವಾರ ತಿಳಿಸಿದರು.
ಈ ಪೈಕಿ 2,800 ಕೋಟಿ ಡಾಲರ್ ಮೊತ್ತ ಸೆಂಟ್ರಲ್ ಬ್ಯಾಂಕ್‌ಗೆ ಬರಲಿದೆ ಹಾಗೂ 400 ಕೋಟಿ ಡಾಲರ್ ಸರಕಾರದ ಪಾಲಾಗಿ ಸರಕಾರಿ ಖಜಾನೆಗೆ ಹೋಗಲಿದೆ ಎಂದು ಸೈಫ್ ಹೇಳಿರುವುದಾಗಿ ಸರಕಾರ ಟೆಲಿವಿಶನ್ ವರದಿ ಮಾಡಿದೆ.
ಇರಾನ್‌ನ ಮಹತ್ವಾಕಾಂಕ್ಷೆಯ ಪರಮಾಣು ಕಾರ್ಯಕ್ರಮದ ಮೇಲೆ ನಿರ್ಬಂಧ ವಿಧಿಸುವುದಕ್ಕೆ ಸಂಬಂಧಿಸಿದ ಮಹತ್ವದ ಒಪ್ಪಂದಕ್ಕೆ ಕಳೆದ ವರ್ಷದ ಜುಲೈನಲ್ಲಿ ಇರಾನ್ ಮತ್ತು ವಿಶ್ವದ ಬಲಿಷ್ಠ ದೇಶಗಳು ಸಹಿ ಹಾಕಿದ್ದವು.
ಅದಾದ ಬಳಿಕ, ಇರಾನ್ ಈ ಒಪ್ಪಂದದ ಅನುಸಾರವೇ ನಡೆಯುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಐಎಇಎ ಕಳೆದ ವಾರಾಂತ್ಯದಲ್ಲಿ ಪ್ರಮಾಣ ಪತ್ರ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಅದಾದ ಬಳಿಕ, ಇರಾನ್ ವಿರುದ್ಧದ ಅಂತಾರಾಷ್ಟ್ರೀಯ ದಿಗ್ಬಂಧನಗಳು ತೆರವುಗೊಂಡಿರುವುದನ್ನು ಸ್ಮರಿಸಬಹುದಾಗಿದೆ.
‘‘ಈ ಸೊತ್ತುಗಳನ್ನು ವಸ್ತುಗಳನ್ನು ಆಮದು ಮಾಡಲು ಬಳಸಬಹುದಾಗಿದೆ’’ ಎಂದರು.
ಈ ಹಣವನ್ನು ವಿದೇಶದ ಕೇಂದ್ರೀಕೃತ ಮತ್ತು ಸುರಕ್ಷಿತ ಖಾತೆಗಳಲ್ಲಿ ಠೇವಣಿ ಇಡುವ ಯೋಜನೆಯನ್ನು ಸೆಂಟ್ರಲ್ ಬ್ಯಾಂಕ್ ಹೊಂದಿದೆ.







