ಸಿಖ್, ಮುಸ್ಲಿಂ ಪ್ರಯಾಣಿಕರನ್ನು ಕೆಳಗಿಳಿಸಿದ ಅಮೆರಿಕ ವಿಮಾನ: 60 ಕೋಟಿ ರೂ. ಪರಿಹಾರ ಕೋರಿ ದಾವೆ

ನ್ಯೂಯಾರ್ಕ್, ಜ. 19: ಅಮೆರಿಕನ್ ಏರ್‌ಲೈನ್ಸ್ ವಿಮಾನವೊಂದರಿಂದ ಹೊರದಬ್ಬಲ್ಪಟ್ಟ ಸಿಖ್ ಮತ್ತು ಮುಸ್ಲಿಂ ಪ್ರಯಾಣಿಕರು ವಿಮಾನ ಕಂಪೆನಿ ವಿರುದ್ಧ 90 ಲಕ್ಷ ಡಾಲರ್ (ಸುಮಾರು 60 ಕೋಟಿ ರೂಪಾಯಿ) ಪರಿಹಾರ ಕೋರಿ ದಾವೆ ಹೂಡಿದ್ದಾರೆ.
ಈ ಪ್ರಯಾಣಿಕರ ಚಹರೆಯಿಂದ ವಿಮಾನ ಕ್ಯಾಪ್ಟನ್ ಕಸಿವಿಸಿಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ.
ಕಳೆದ ತಿಂಗಳು ಟೊರಾಂಟೊ-ನ್ಯೂಯಾರ್ಕ್ ವಿಮಾನದಿಂದ ಕೆಳಗಿಳಿಯುವಂತೆ ಸಿಖ್ ಶಾನ್ ಆನಂದ್‌ಮತ್ತು ಅವರ ಮೂವರು ಸ್ನೇಹಿತರಿಗೆ ಆದೇಶ ನೀಡಲಾಗಿತ್ತು. ಅವರ ಜನಾಂಗ, ಬಣ್ಣ ಮತ್ತು ಧರ್ಮವನ್ನು ಗಣನೆಗೆ ತೆಗೆದುಕೊಂಡು ಕ್ಯಾಪ್ಟನ್ ಈ ನಿರ್ಧಾರ ತೆಗೆದುಕೊಂಡಿದ್ದರು ಎಂದು ಸಿಎನ್‌ಎನ್ ವರದಿಯೊಂದು ಹೇಳಿದೆ.
ಆನಂದ್‌ರ ಸ್ನೇಹಿತರಾದ ಓರ್ವ ಬಾಂಗ್ಲಾದೇಶಿ ಮುಸ್ಲಿಂ ಮತ್ತು ಓರ್ವ ಅರಬ್ ಮುಸ್ಲಿಂನ್ನು ಡಬ್ಲುಎಚ್ ಮತ್ತು ಎಂಕೆ ಎಂಬುದಾಗಿ ಮಾತ್ರ ಗುರುತಿಸಲಾಗಿದೆ.
ಆನಂದ್ ಮತ್ತು ಅವರ ಸ್ನೇಹಿತ ಫೈಮುಲ್ ಅಲಂ ವಿಮಾನ ಏರಿದ ಬಳಿಕ ಡಬ್ಲುಎಚ್ ಮತ್ತು ಎಂಕೆ ಅವರ ಜೊತೆ ಕುಳಿತುಕೊಳ್ಳುವುದಕ್ಕಾಗಿ ಅಪರಿಚಿತರೊಂದಿಗೆ ಸ್ಥಳ ವಿನಿಮಯ ಮಾಡಿಕೊಂಡರು.
ಕೆಲವು ನಿಮಿಷಗಳ ಬಳಿಕ, ಓರ್ವ ಬಿಳಿಯ ವಿಮಾನ ಪರಿಚಾರಕಿಯು ಡಬ್ಲುಎಚ್‌ರಿಗೆ ವಿಮಾನದಿಂದ ಕೆಳಗಿಳಿಯುವಂತೆ ಸೂಚಿಸಿದರು ಎಂದು ದಾವೆಯಲ್ಲಿ ದೂರಲಾಗಿದೆ. ದಾವೆಯನ್ನು ನಿನ್ನೆ ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯದಲ್ಲಿ ಹೂಡಲಾಗಿದೆ.
ತಮ್ಮನ್ನು ಯಾಕೆ ವಿಮಾನದಿಂದ ಹೊರಹಾಕಲಾಗುತ್ತಿದೆ ಎಂಬುದಾಗಿ ಅವರು ವಿಮಾನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ‘‘ಶಾಂತಿಯುತವಾಗಿ’’ ಹೋಗಿ ಎಂದು ಪರಿಚಾರಕಿ ಅವರಿಗೆ ಸೂಚಿಸಿದರು. ಅದೂ ಅಲ್ಲದೆ, ಬಳಿಕ, ಬಾಗಿಲಿಗೆ ಹಿಂದಿರುಗಿ ಮುಂದಿನ ಸೂಚನೆಗಳಿಗಾಗಿ ಕಾಯಿರಿ ಎಂದೂ ಹೇಳಿದರು ಎಂದು ದಾವೆಯಲ್ಲಿ ಆರೋಪಿಸಲಾಗಿದೆ.
‘‘ಅವರ ವರ್ತನೆ ನಾನೋರ್ವ ಕ್ರಿಮಿನಲ್ ಎಂಬ ಭಾವನೆಯನ್ನು ನನ್ನಲ್ಲಿ ಮೂಡಿಸಿತು’’ ಎಂದು ಡಬ್ಲುಎಚ್ ನುಡಿದರು. ‘‘ಅದು ನನ್ನನ್ನು ಒಂದು ವೇದಿಕೆಯಲ್ಲಿ ನಿಲ್ಲಿಸಿ ಎಲ್ಲರೂ ನನ್ನತ್ತ ಕೈತೋರಿಸುತ್ತಿದ್ದಂತಿತ್ತು. ಅವರ ಹೆದರಿದ್ದಾರೆ ಎಂದು ನನಗೆ ಹೆದರಿಕೆಯಾಯಿತು’’ ಎಂದರು.
‘‘ನೀವು ವಿಮಾನ ಹತ್ತುವಂತಿಲ್ಲ. ಯಾಕೆಂದರೆ ವಿಮಾನ ಸಿಬ್ಬಂದಿ, ಅದರಲ್ಲೂ ವಿಶೇಷವಾಗಿ ಕ್ಯಾಪ್ಟನ್ ವಿಮಾನದಲ್ಲಿ ನಿಮ್ಮ ಉಪಸ್ಥಿತಿಯಿಂದ ಅಸಂತುಷ್ಟರಾಗಿದ್ದಾರೆ ಹಾಗೂ ನಿಮ್ಮನ್ನು ವಿಮಾನದಿಂದ ಕೆಳಗಿಳಿಸದ ಹೊರತು ವಿಮಾನ ಹಾರಿಸಲು ನಿರಾಕರಿಸಿದ್ದಾರೆ’’ ಎಂಬುದಾಗಿ ವಿಮಾನದ ಪ್ರತಿನಿಧಿಯೊಬ್ಬ ಅವರಿಗೆ ಹೇಳಿದ ಬಳಿಕವಷ್ಟೇ ವಿಮಾನ ಹಾರಾಟ ನಡೆಸಿತು’’ ಎಂದು ವರದಿ ಹೇಳಿದೆ.
ಈ ನಾಲ್ವರು ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಾಟ ನಡೆಸಿತು. ‘‘ಇದು ಶಿಷ್ಟಾಚಾರ ಎಂದು ಅವರು ಹೇಳಿದರು’’ ಎಂದು ಆನಂದ್ ಹೇಳಿದ್ದಾರೆ.







