ರೋಹಿತ್ ಆತ್ಮಹತ್ಯೆ: ತನಿಖೆಯ ಮೇಲೆ ಪರಿಶಿಷ್ಟ ಆಯೋಗ ನಿಕಟ ನಿಗಾ

ಹೊಸದಿಲ್ಲಿ, ಜ.19: ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ, ಆತ್ಮಹತ್ಯೆ ಪ್ರಕರಣದ ತನಿಖೆಯು ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗವು ಮಂಗಳವಾರ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ಆಯೋಗವು ನಿಕಟವಾದ ನಿಗಾವಿರಿಸುವುದು. ತನಿಖೆಯು ನ್ಯಾಯಸಮ್ಮತವಾಗಿ ಹಾಗೂ ತ್ವರಿತವಾಗಿ ನಡೆಯುವಂತೆ ಮಾಡಲು ಅಧಿಕಾರಿಗಳಿಗೆ ಸಮನ್ಸ್ ನೀಡಲು ತಾನು ಹಿಂಜರಿಯುವುದಿಲ್ಲವೆಂದು ಆಯೋಗದ ಅಧ್ಯಕ್ಷ ಪಿ.ಎಲ್.ಪೂನಿಯಾ ತಿಳಿಸಿದ್ದಾರೆ.
ಆಯೋಗದ ತಂಡವು ಹೈದರಾಬಾದ್‌ಗೆ ಆಗಮಿಸಿದ ಕೆಲವೇ ತಾಸುಗಳ ಮೊದಲಷ್ಟೇ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಬಗ್ಗೆ ಹೈದರಾಬಾದ್‌ನ ಪೊಲೀಸ್ ಆಯುಕ್ತರಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವುದಾಗಿ ಅವರು ಹೇಳಿದ್ದಾರೆ. ವೇಮುಲಾ ಹಾಗೂ ಅವರ ಗೆಳೆಯರು ಸಲ್ಲಿಸಿದ ದೂರುಗಳನ್ನು ಕೂಡಾ ಪೊಲೀಸರು ನಿರ್ಲಕ್ಷಿಸಿದ್ದರೆಂದು ಪೂನಿಯಾ ಆಪಾದಿಸಿದರು.
ರೋಹಿತ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪುನರಚಿತವಾದ 2015ರ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆಯಡಿ ನಡೆಸಬಹುದೆಂದು, ಕಾನೂನು ತಜ್ಞರು ಅಭಿಪ್ರಾಯಿಸಿದ್ದಾರೆ. ಈ ನೂತನ ಕಾನೂನಿನಡಿ ದಲಿತರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರವನ್ನು ವಿಧಿಸುವುದು ದಂಡನೀಯ ಅಪರಾಧವಾಗಿದ್ದು, 5 ವರ್ಷದ ವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.





