ಪೊಲೀಸ್ ಕಸ್ಟಡಿಯಿಂದ ಪತಿಯ ಪರಾರಿಗೆ ನೆರವಾದ ಬಿಹಾರ ಶಾಸಕಿ

ಪಾಟ್ನಾ, ಜ.19: ಬಿಹಾರದ ಪೂರ್ಣಿಯಾ ಜಿಲ್ಲೆಯ ಶಾಸಕಿಯೊಬ್ಬರು, ಕೊಲೆ ಪ್ರಕರಣವೊಂದರಲ್ಲಿ ಸಾಕ್ಷಿಯೊಬ್ಬನಿಗೆ ಬೆದರಿಕೆ ಹಾಕಿದ್ದಕ್ಕಾಗಿ ಬಂಸಲ್ಪಟ್ಟಿದ್ದ ತನ್ನ ಪತಿಗೆ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ನೆರವಾದ ಆರೋಪವನ್ನು ಎದುರಿಸುತ್ತಿದ್ದಾರೆ. ಶಾಸಕಿ ಬೀಮಾ ಭಾರ್ತಿ, ತನ್ನ ಪತಿ ಅವಧೇಶ್ ಮಂಡಲ್‌ಗೆ, ಸೋಮವಾರ ರಾತ್ರಿ ಮಾರಂಗ ಪೊಲೀಸ್ ಠಾಣೆಯಿಂದ ಪರಾರಿಯಾಗಲು ಸಹಾಯ ಮಾಡಿದ್ದಾರೆನ್ನಲಾಗಿದೆ. ಪೂರ್ನಿಯಾ ಸಂಸದ ಸಂತೋಷ್ ಕುಶಾವಾ ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆಂದು ಅಂಗ್ಲ ದೈನಿಕವೊಂದರಲ್ಲಿ ಪ್ರಕಟವಾದ ವರದಿ ತಿಳಿಸಿದೆ.
ಹತ್ತು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂದಿಸಿ ಸಾಕ್ಷ ನೀಡಿದಲ್ಲಿ, ಗಂಭೀರ ಪರಿಣಾಮಗಳಾಗುವುದೆಂದು ಮೂವರು ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ್ದಕ್ಕಾಗಿ, ಮಂಡಲ್‌ನನ್ನು ಪೂರ್ಣಿಯಾ ಪೊಲೀಸರು ಬಂದಿಸಿದ್ದರು. ಮಂಡಲ್ 100ಕ್ಕೂ ಅದಿಕ ಕೊಲೆ, ಸುಲಿಗೆ ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಮಂಡಲ್ ಬಂಧನದ ಬಳಿಕ ಆತನ ಪತ್ನಿ ಭಾರ್ತಿ ಹಾಗೂ ಸಂಸದ ಸಂತೋಷ್ ಕುಶವಾಹಾ, ಸುಮಾರು 150 ಮಂದಿ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಠಾಣೆಯಲ್ಲಿ ಪ್ರಕರಣದ ದಾಖಲೆಪತ್ರಗಳನ್ನು ಪರಿಶೀಲಿಸಲು ಮಂಡಲ್‌ಗೆ ಕುಶವಾಹ ನೆರವಾಗುತ್ತಿದ್ದನು. ಆಗ ಭಾರ್ತಿ ತನ್ನ ಎಸ್‌ಯುವಿ ವಾಹನದಲ್ಲಿ ಇಬ್ಬರು ಸಶಸ ಕಾವಲುಗಾರರೊಂದಿಗೆ ಕುಳಿತುಕೊಂಡಿದ್ದಳು.
ದಾಖಲೆಪತ್ರಗಳಿಗೆ ಸಹಿಹಾಕಲು ಮಂಡಲ್‌ನ ಕೈಕೋಳಗಳನ್ನು ಬಿಚ್ಚಿದಾಗ, ಆತ ಕೂಡಲೇ ಎಸ್‌ಯುವಿನತ್ತ ಓಡಿದನು. ಕ್ಷಣಮಾತ್ರದಲ್ಲಿ ವಾಹನವು ಮಿಂಚಿನಂತೆ ಸ್ಥಳದಿಂದ ಪಲಾಯನ ಮಾಡಿತು.







