ಪ್ರಾಮಾಣಿಕತೆ, ಸರಳತೆಗೆ ಶಾಸ್ತ್ರಿ ಆದರ್ಶ: ಅನಿಲ್ ಶಾಸ್ತ್ರಿ

ಬೆಂಗಳೂರು, ಜ.19: ಯುವ ಸಮುದಾಯ ಜಾಗತಿಕವಾಗಿ ಎದುರಾಗುವ ಸ್ಪರ್ಧೆಯನ್ನು ಎದುರಿಸುವ ಅರ್ಹತೆ ಪಡೆಯಬೇಕೆಂದು ಕೇಂದ್ರದ ಮಾಜಿ ಸಚಿವ ಅನಿಲ್ ಶಾಸ್ತ್ರಿ ಇಂದಿಲ್ಲಿ ಸಲಹೆ ನೀಡಿದರು.
ಎಂವಿಆರ್ ಫೌಂಡೇಶನ್ ಆಯೋಜಿಸಿದ್ದ ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ರಾಜಕೀಯ ಮೌಲ್ಯಗಳು ಮತ್ತು ಸಿದ್ಧಾಂತಗಳ ಸ್ಮರಣೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಗತೀಕರಣ ನಂತರ ಭಾರತದಲ್ಲೂ ಸಾಕಷ್ಟು ಬದಲಾಗಿದ್ದು, ಅವಕಾಶಗಳಿಗೆ ಅನುಗುಣವಾಗಿ ಸ್ಪರ್ಧೆ ಎದುರಿಸುವಂತಹ ಅರ್ಹತೆ ಪಡೆಯಬೇಕೆಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿ ಆಗಿದ್ದಾಗ ತಮ್ಮ ಮಗನಿಗೆ 18 ವರ್ಷ ತುಂಬದಿದ್ದರೂ ಕಾರ್ ಚಾಲನಾ ಪರವಾನಿಗೆ ಸಿಕ್ಕಿತ್ತು. ಅದನ್ನು ಗಮನಿಸಿದ ಕೂಡಲೇ ತುಂಬಾ ನೊಂದುಕೊಂಡ ಶಾಸ್ತ್ರಿ ಅವರು ಪ್ರಧಾನಿ ಅವರ ಮನೆ ಮತ್ತು ಮಗನಿಂದ ಕಾನೂನು ಉಲ್ಲಂಘನೆ ಆಗಿದೆ ಎಂದು ಮನವರಿಕೆ ಮಾಡಿಕೊಟ್ಟು ಕಾರು ಚಾಲನಾ ಪರವಾನಿಗೆ ಹಿಂತಿರುಗಿಸುವಂತೆ ಮಾಡಿದರು ಎಂದು ಅವರು ಹೇಳಿದರು.
ಎಂವಿಆರ್ ಫೌಂಡೇಶನ್‌ನ ಉಪಾಧ್ಯಕ್ಷ ಎಚ್.ಹನುಮಂತಪ್ಪಮಾತನಾಡಿ, ವರದಕ್ಷಿಣೆ ಪಡೆಯದೆ ಮದುವೆ ಆಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸಾರ್ವಜನಿಕ ಜೀವನದಲ್ಲಿ ಸರಕಾರಿ ಸೌಲಭ್ಯಗಳನ್ನು ಸ್ವಾರ್ಥಕ್ಕೆ ಬಳಸದೆ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರೈಲು ಅಪಘಾತವಾದಾಗ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ ಶಾಸ್ತ್ರಿ ಅವರಿಗೆ ದೂರದೃಷ್ಟಿ ಇತ್ತು. ಆಡಳಿತದಲ್ಲಿ ಪರಿಶುದ್ಧತೆ ಹಾಗೂ ಪ್ರಾಮಾಣಿಕತೆ ಪ್ರದರ್ಶಿಸಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹೊ.ಶ್ರೀನಿವಾಸಯ್ಯ, ಕಾರ್ಯದರ್ಶಿ ಪ್ರೊ.ಜಿ.ಬಿ.ಶಿವರಾಜು, ಗಾಂಧಿವಾದಿ ಎಸ್.ಎಂ.ಸುಬ್ಬರಾಯ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.





