ಬಿಜೆಪಿಯ ಚುಕ್ಕಾಣಿ ಯಾರ ಕೈಗೆ?
ಬಿಜೆಪಿ ಇನ್ನೊಂದು ಅಗ್ನಿ ಪರೀಕ್ಷೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷರ ಅವಧಿ ಮುಗಿಯುತ್ತಾ ಬಂದಿದೆ. ಜನವರಿ ಕೊನೆಯ ವಾರದಲ್ಲಿ ಬಿಜೆಪಿಯ ಅಧ್ಯಕ್ಷರ ಆಯ್ಕೆ ನಡೆಯಬೇಕಾಗಿದೆ. ರಾಜ್‌ನಾಥ್ ಸಿಂಗ್ ಅವರು ಸುಮಾರು ಒಂದೂವರೆ ವರ್ಷ ನಿಭಾಯಿಸಿದ ಅಧ್ಯಕ್ಷಸ್ಥಾನದ ಉಳಿದ ಅವಧಿಯನ್ನು ಅಮಿತ್ ಶಾ ನಿರ್ವಹಿಸಿದ್ದರು. ಇದೀಗ ಆ ಮೂರು ವರ್ಷ ಮುಗಿದಿದ್ದು, ಹೊಸ ವರ್ಷಕ್ಕೆ ಹೊಸ ಅಧ್ಯಕ್ಷನನ್ನು ಚುನಾಯಿಸಬೇಕಾಗಿದೆ. ಹಾಗೆ ನೋಡಿದರೆ, ಅಮಿತ್ ಶಾ ಅವರು ಬರೇ ಒಂದೂವರೆ ವರ್ಷವಷ್ಟೇ ಅಧಿಕಾರವನ್ನು ನಿರ್ವಹಿಸಿದ್ದಾರೆ. ಅಂದರೆ ರಾಜ್‌ನಾಥ್ ಸಿಂಗ್ ಅವರು ಕೇಂದ್ರ ಸಚಿವರಾದ ಬಳಿಕ, ಅವರ ಕೈಯಿಂದ ಆ ಸ್ಥಾನವನ್ನು ಅಮಿತ್ ಶಾ ವಹಿಸಿಕೊಂಡಿದ್ದರು. ಇದೀಗ ಶಾ ಅವರು ರಾಜೀನಾಮೆ ನೀಡಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ. ಅಥವಾ ಅಮಿತ್ ಶಾ ಅವರೇ ಎರಡನೆ ಅವಧಿಗೆ ರಾಷ್ಟ್ರಾಧ್ಯಕ್ಷರಾಗಿ ಮುಂದುವರಿಯಬಹುದಾಗಿದೆ.
ಆದರೆ ಅಮಿತ್ ಶಾ ಮರು ಆಯ್ಕೆ ಬಿಜೆಪಿ ಪಾಲಿಗೆ ಬಿಕ್ಕಟ್ಟಾಗಿ ಪರಿಣಮಿಸುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಬಿಜೆಪಿ ಈಗಾಗಲೇ ಮೂರು ಭಾಗವಾಗಿ ಒಡೆದಿದೆ. ಒಂದು ಬಿಜೆಪಿಯ ಹಿರಿಯರ ಗುಂಪು. ಅಡ್ವಾಣಿ, ಮುರಳಿ ಮನೋಹರ ಜೋಷಿ, ಶತ್ರುಘ್ನ ಸಿನ್ಹಾ ಮೊದಲಾದವರು ಈ ಗುಂಪಿನಲ್ಲಿದ್ದು, ಈಗಾಗಲೇ ಮೋದಿ ಸರಕಾರದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಬಿಹಾರದ ಬಿಜೆಪಿ ಸೋಲನ್ನು ಇವರು ಕಾಂಗ್ರೆಸ್‌ಗಿಂತಲೂ ಅಧಿಕವಾಗಿ ಸಂಭ್ರಮಿಸಿದ್ದಾರೆ. ಇನ್ನೊಂದು ಗುಂಪು ಮೋದಿಯದ್ದು. ಈ ಗುಂಪಿನ ಕೇಂದ್ರ ಬಿಂದುಗಳಾಗಿರುವವರು ಮೋದಿ ಮತ್ತು ಅಮಿತ್ ಶಾ. ಇವರ ಹಿಂದಿರುವವರು ಗೆದ್ದೆತ್ತಿನ ಬಾಲ ಹಿಡಿದವರು. ಸದ್ಯಕ್ಕೆ ಅಧಿಕಾರ ಅನುಭವಿಸುತ್ತಿರುವ ಬಹಳಷ್ಟು ಜನರು ಮೋದಿಯ ವರ್ಚಸ್ಸನ್ನು ಬಲವಾಗಿ ನಂಬಿದ್ದಾರೆ. ತಾವು ಅನುಭವಿಸುತ್ತಿರುವ ಅಧಿಕಾರ ಮೋದಿಯ ವರ್ಚಸ್ಸಿನ ಫಲ ಎನ್ನುವ ಕಾರಣಕ್ಕಾಗಿಯೇ ಇವರು ಮೋದಿಯ ಜೊತೆಗೆ ಬಲವಾಗಿ ನಿಂತಿದ್ದಾರೆ. ಮೂರನೆಯದು ಅತ್ಯಂತ ಬಲವಾದ ಗುಂಪು. ಒಂದು ರೀತಿಯಲ್ಲಿ ಬಿಜೆಪಿಯ ತಾಯಿ ಬೇರು. ಆರೆಸ್ಸೆಸ್. ಈ ಮೂರು ಗುಂಪುಗಳಲ್ಲಿ ಸಮನ್ವಯತೆಯಿದ್ದರೆ ಮಾತ್ರ ಅಮಿತ್ ಶಾ ಮತ್ತೆ ಅಧ್ಯಕ್ಷರಾಗಬಲ್ಲರು. ಇಡೀ ಬಿಜೆಪಿ ಅಮಿತ್ ಶಾ ಮತ್ತು ನರೇಂದ್ರ ಮೋದಿಯ ಕಡೆಗೆ ಕೇಂದ್ರೀಕೃತವಾದದ್ದು ಮತ್ತು ಆರೆಸ್ಸೆಸ್‌ನ ಹಿಡಿತ ಸಡಿಲಗೊಂಡಿರುವುದು ಆರೆಸ್ಸೆಸ್‌ನೊಳಗೆ ತಳಮಳವನ್ನು ಸೃಷ್ಟಿಸಿದೆ. ಕಾರ್ಪೊರೇಟ್ ಶಕ್ತಿಗಳ ಸೂತ್ರದ ಬಲದಿಂದ ಮೋದಿ ಮಾಧ್ಯಮಗಳಲ್ಲಿ ಮಿಂಚುತ್ತಿದ್ದು, ಸರಕಾರ ಮತ್ತು ಪಕ್ಷ ತನ್ನ ನಿಯಂತ್ರಣ ತಪ್ಪುತ್ತಿದೆ ಎನ್ನುವುದು ಆರೆಸ್ಸೆಸ್ ಆತಂಕವಾಗಿದೆ. ಆದುದರಿಂದಲೇ, ಅಮಿತ್ ಶಾ ಅವರನ್ನು ಮರು ಅಧ್ಯಕ್ಷರನ್ನಾಗಿಸಲು ಆರೆಸ್ಸೆಸ್ ಸಿದ್ಧವಿಲ್ಲ. ಇದೇ ಸಂದರ್ಭದಲ್ಲಿ ಅಮಿತ್ ಶಾ ಅಧ್ಯಕ್ಷರಾಗುವುದನ್ನು ಅಡ್ವಾಣಿ ಗುಂಪು ಸಹ ಆಕ್ಷೇಪಿಸುತ್ತಿದೆ. ಆರೆಸ್ಸೆಸ್‌ನ ಇಂಗಿತಕ್ಕೆ ಈ ಗುಂಪು ತನ್ನ ಪೂರ್ಣ ಬೆಂಬಲವನ್ನು ನೀಡಿದೆ. ಆದರೆ ನರೇಂದ್ರ ಮೋದಿಯವರು ಮಾತ್ರ ಅಮಿತ್ ಶಾ ಅವರೇ ಪುನರಾಯ್ಕೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಮಿತ್ ಶಾ ಅವರು ಮೋದಿಯ ಇನ್ನೊಂದು ಮುಖ. ಪಕ್ಷದ ನಿಯಂತ್ರಣ ಅಮಿತ್ ಶಾ ಕೈಯಲ್ಲಿರುವವರೆಗೆ ಮೋದಿಯ ನಿಯಂತ್ರಣದಲ್ಲೂ ಇರುತ್ತದೆ. ಅಧ್ಯಕ್ಷ ಬದಲಾದರೆ, ಸರಕಾರ ಮತ್ತು ಪಕ್ಷದ ನಡುವೆ ಬಿರುಕು ಕಾಣಿಸಿಕೊಳ್ಳಬಹುದು ಎನ್ನುವುದು ಮೋದಿಯ ಭಯ. ಆದುದರಿಂದಲೇ, ನರೇಂದ್ರ ಮೋದಿ ಬೇರೊಂದು ತರ್ಕವನ್ನು ಮುಂದಿಟ್ಟಿದ್ದಾರೆ. ‘‘ಶಾ ಅವರು ರಾಜ್‌ನಾಥ್ ಸಿಂಗ್ ಅವರ ಉಳಿದ ಅವಧಿಯನ್ನಷ್ಟೇ ಪೂರ್ತಿಗೊಳಿಸಿದ್ದಾರೆ. ಆದುದರಿಂದ ಇನ್ನೂ ಒಂದೂವರೆ ವರ್ಷ ಮುಂದುವರಿಯಲು ಅವರಿಗೆ ಅವಕಾಶ ನೀಡಬೇಕು’’ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ. ಆದರೆ ಇದಕ್ಕೆ ಆರೆಸ್ಸೆಸ್‌ನ ಸಮ್ಮತಿ ಸಿಕ್ಕಿಲ್ಲ. ಕಟ್ಟ ಕಡೆಗೆ ಇದೀಗ ಇನ್ನೊಂದು ಪ್ರಸ್ತಾಪವನ್ನು ಆರೆಸ್ಸೆಸ್ ಮುಂದಿಟ್ಟಿದೆ. ಅದೆಂದರೆ, ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ ಮುಂದುವರಿಯಬೇಕು. ಆದರೆ ಇದೇ ಸಂದರ್ಭದಲ್ಲಿ ಬಿಜೆಪಿಯ ಇನ್ನೆರಡು ಪ್ರಮುಖ ಸ್ಥಾನಗಳನ್ನು ಆರೆಸ್ಸೆಸ್‌ನ ಪ್ರಭಾವಿ ಕಾರ್ಯಕರ್ತರಿಗೆ ನೀಡಬೇಕು. ಹಾಗೆಯೇ ಅಮಿತ್ ಶಾ ಅವರು ಒಂದೂವರೆ ವರ್ಷ ಪೂರೈಕೆ ಮಾಡಿದ ಬಳಿಕ ಸ್ಥಾನವನ್ನು ಆರೆಸ್ಸೆಸ್ ಸೂಚಿಸಿದ ವ್ಯಕ್ತಿಗೆ ನೀಡಬೇಕು. ಇದಕ್ಕೆ ಪೂರ್ಣವಾಗಿ ನರೇಂದ್ರ ಮೋದಿ ಸಮ್ಮತಿಸುವ ಸಾಧ್ಯತೆ ಕಡಿಮೆ. ಸದ್ಯ, ತಾನು ಅಧಿಕಾರದಲ್ಲಿರುವವರೆಗೂ ಅಮಿತ್ ಶಾ ಅವರೇ ರಾಷ್ಟ್ರೀಯ ಅಧ್ಯಕ್ಷರಾಗಬೇಕು ಎನ್ನುವುದು ಮೋದಿಯ ಒಲವು. ಎಲ್ಲಕ್ಕಿಂತಲೂ ಹೆಚ್ಚಾಗಿ, ಬಿಜೆಪಿಯ ಮುಖ್ಯ ಸ್ಥಾನ ತನ್ನ ಜನರಿಂದ ಕೈ ತಪ್ಪಿ ಹೋದರೆ, ಪಕ್ಷದ ಮೇಲಿನ ಹಿಡಿತವೂ ಕೈತಪ್ಪಬಹುದು ಎನ್ನುವ ಆತಂಕವೂ ಅವರೊಳಗಿದೆ. ಆದುದರಿಂದಲೇ ಆರೆಸ್ಸೆಸ್‌ನ ಪ್ರಸ್ತಾಪಕ್ಕೆ ಮೋದಿ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆರೆಸ್ಸೆಸ್‌ನ ಪ್ರಸ್ತಾಪಕ್ಕೆ ನರೇಂದ್ರ ಮೋದಿ ಪ್ರತಿಕ್ರಿಯಿಸಲೇಬೇಕಾಗಿದೆ. ಆದರೆ ಪ್ರತಿಕ್ರಿಯಿಸುವುದು ಅಷ್ಟು ಸುಲಭದ ವಿಷಯವಂತೂ ಅಲ್ಲ. ಮೋದಿ ತನ್ನ ವೌನವನ್ನು ಮುರಿದ ಬೆನ್ನಿಗೇ ಬಿಜೆಪಿಯೊಳಗೆ ಅಲ್ಲಲ್ಲಿ ಭಿನ್ನ ಧ್ವನಿಗಳು ಸಿಡಿಯಲಿವೆ. ಈ ಹಿಂದೆ ಗಡ್ಕರಿಯ ಬದಲಾವಣೆಯ ಸಂದರ್ಭದಲ್ಲಿ ಏನು ಸಂಭವಿಸಿತ್ತೋ, ಅದಕ್ಕಿಂತಲೂ ಹೆಚ್ಚಿನ ಭಿನ್ನಾಭಿಪ್ರಾಯಗಳು ಈ ಬಾರಿ ಕಂಡುಬರುವ ಸಾಧ್ಯತೆಯಿದೆ. ಈಗಾಗಲೇ ಮೋದಿಯ ಆಡಳಿತದ ವರ್ಚಸ್ಸು ಕುಸಿಯ ತೊಡಗಿದೆ. ಮೋದಿ ವಿರೋಧಿಗಳು ಇದನ್ನೂ ಬಳಸಿಕೊಂಡು, ಪಕ್ಷದ ಮೇಲೆ ಕಳೆದುಹೋದ ನಿಯಂತ್ರಣವನ್ನು ಮತ್ತೆ ತನ್ನದಾಗಿಸಿಕೊಳ್ಳುವ ಪ್ರಯತ್ನ ನಡೆಸಬಹುದು. ಒಟ್ಟಿನಲ್ಲಿ ಈ ಅಗ್ನಿಪರೀಕ್ಷೆಯಿಂದ ಬಿಜೆಪಿ ಅದು ಹೇಗೆ ಪಾರಾಗಿ ಬರುತ್ತದೆ ಎನ್ನುವುದನ್ನು ರಾಜಕೀಯ ವಿಶ್ಲೇಷಕರು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.







