ಆಸ್ಟ್ರೇಲಿಯದ ಆಫ್-ಸ್ಪಿನ್ನರ್ ನಥನ್ ಹೌರಿಟ್ಜ್ ನಿವೃತ್ತಿ

ಮೆಲ್ಬೋರ್ನ್, ಜ.19: ಆಸ್ಟ್ರೇಲಿಯದ ಆಫ್-ಸ್ಪಿನ್ನರ್ ನಥನ್ ಹೌರಿಟ್ಜ್ ಮಂಗಳವಾರ ಎಲ್ಲ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತನ್ನ 15 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಶೇನ್ ವಾರ್ನ್ ನಿವೃತ್ತಿಯ ನಂತರ ಆಸ್ಟ್ರೇಲಿಯ ತಂಡದಲ್ಲಿ ಮಿಂಚಿದ್ದ ಕೆಲವೇ ಸ್ಪಿನ್ನರ್‌ಗಳ ಪೈಕಿ ಹೌರಿಟ್ಜ್ ಓರ್ವರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ರಾಜ್ಯ ತಂಡದಿಂದಲೂ ದೂರವುಳಿದಿದ್ದ ಹೌರಿಟ್ಜ್ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮೆಲ್ಬೋರ್ನ್ ತಂಡದ ಪರ ಈ ವರ್ಷ ಕೇವಲ ಒಂದು ಪಂದ್ಯ ಆಡಿದ್ದರು.
ಪರ್ತ್ ವಿರುದ್ಧದ ಬಿಗ್‌ಬ್ಯಾಶ್ ಪಂದ್ಯದಲ್ಲಿ 34ರ ಹರೆಯದ ಹೌರಿಟ್ಜ್ 2 ಓವರ್‌ಗಳಲ್ಲಿ 29 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾಗಿದ್ದರು.
2002ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಹೌರಿಟ್ಜ್ 2004ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ಟೆಸ್ಟ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. 17 ಟೆಸ್ಟ್‌ಗಳಲ್ಲಿ 63 ವಿಕೆಟ್‌ಗಳನ್ನು ಕಬಳಿಸಿರುವ ಹೌರಿಟ್ಜ್, 58 ಏಕದಿನಗಳಲ್ಲೂ 63 ವಿಕೆಟ್ ಕಬಳಿಸಿದ್ದರು. 2010ರಲ್ಲಿ ಭಾರತ ವಿರುದ್ಧವೇ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ‘‘ವೃತ್ತಿಜೀವನದಲ್ಲಿ ಹಲವಾರು ಸ್ಮರಣೀಯ ಕ್ಷಣವನ್ನು ಎದುರಿಸಿದ್ದೇನೆ. ನನ್ನ ಸಾಧನೆಯ ಬಗ್ಗೆ ನನಗೆ ಹೆಮ್ಮೆಯಿದೆ’’ ಎಂದು ಹೌರಿಟ್ಜ್ ಹೇಳಿದ್ದಾರೆ.







