ಪಟ್ಟಭದ್ರರ ಕಪಿಮುಷ್ಟಿಯಲ್ಲಿ ವಿವೇಕಾನಂದರ ಚಿಂತನೆಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜ.19: ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಿರುಚುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ಸರಕಾರದ ವತಿಯಿಂದ ವಿವೇಕಾನಂದರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ಕರ್ನಾಟಕ ಸರಕಾರದ ವತಿಯಿಂದ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಸದಾ ದೀನ ದಲಿತರ ಏಳಿಗೆಯ ಬಗ್ಗೆ ಚಿಂತಿಸುತ್ತಿದ್ದರು. ಹಾಗೂ ದೇಶಕ್ಕೆ ಶಾಪವಾಗಿರುವ ಜಾತಿ ಪದ್ಧತಿ, ಕೋಮು ಸೌಹಾರ್ದತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಆದರೆ, ಪಟ್ಟಭದ್ರರು ವಿವೇಕಾನಂದರ ಈ ಚಿಂತನೆಗಳ ಕುರಿತು ಎಲ್ಲಿಯೂ ಪ್ರಚಾರ ಮಾಡಿಲ್ಲ. ಹೀಗಾಗಿ ಸರಕಾರದ ವತಿಯಿಂದಲೇ ವಿವೇಕಾನಂದರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತದಲ್ಲಿ ಅಧಿಕಾರ, ವಿದ್ಯೆ ಹಾಗೂ ಸಂಪತ್ತು ಒಂದು ವರ್ಗದ ಸ್ವತ್ತಾಗಿದೆ. ಇದರಿಂದ ಅಸಮಾನತೆ, ಅಶಾಂತಿ ಹಾಗೂ ದ್ವೇಷ ತುಂಬಿದೆ. ಇದನ್ನು ಹೋಗಲಾಡಿಸಿ ಪ್ರತಿಯೊಬ್ಬರು ಸಮಾನವಾಗಿ, ಸ್ವತಂತ್ರವಾಗಿ ಬದುಕಬೇಕು. ಆಗ ಮಾತ್ರ ದೇಶದ ಸರ್ವತೋಮುಖವಾಗಿ ಅಭಿವೃದ್ಧಿ ಯಾಗಲು ಸಾಧ್ಯವೆಂದು ವಿವೇಕಾನಂದರು ಪ್ರತಿಪಾದಿಸುತ್ತಿದ್ದರು ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದರು.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಅಧ್ಯಾತ್ಮ ವನ್ನು ಅನ್ನ ಕೇಂದ್ರಿತವಾಗಿ ರೂಪಿಸಿ, ಹಸಿವನ್ನು ನೀಗಿಸುವುದೆ ನಿಜವಾದ ಧರ್ಮವೆಂದು ಸಾರಿದ ಸಮಾಜ ಸುಧಾರಕ ಸ್ವಾಮಿ ವಿವೇಕಾನಂದರು. ಅವರ ಒಟ್ಟು ಆಧ್ಯಾತ್ಮಿಕ ಚಿಂತನೆಗಳು ಸಾಮಾಜಿಕ ಸುಧಾರಣೆಯ ಪ್ರತಿರೂಪವಾಗಿವೆ ಎಂದು ಅಭಿಪ್ರಾಯಿಸಿದರು.
ಹಿಂದೂಧರ್ಮದ ಜನಪರ ವಿಚಾರಗಳನ್ನು ಪ್ರಚಾರ ಮಾಡುತ್ತಲೇ, ಅದರಲ್ಲಿರುವ ಜಾತಿ, ವರ್ಗ ಹಾಗೂ ಲಿಂಗತಾರತಮ್ಯಗಳ ವಿರುದ್ಧ ಬಹಿರಂಗವಾಗಿ ಟೀಕಿಸುತ್ತಿದ್ದರು. ಸರ್ವಧರ್ಮಗಳನ್ನು ಒಳಗೊಂಡಿರುವ ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮಗಳು ಸಮ್ಮಿಲನದಿಂದ ಮಾತ್ರ ದೇಶ ಅಭಿವೃದ್ಧಿಗೊಳ್ಳಲು ಸಾಧ್ಯವೆಂದು ವಿವೇಕಾನಂದರು ಪ್ರಬಲವಾಗಿ ನಂಬಿದ್ದರೆಂದು ಬರಗೂರು ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪ್ರಸ್ತುತ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಜಾತಿ, ಧರ್ಮಗಳ ಮಧ್ಯೆ ದೊಡ್ಡ ಕಂದಕ ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾದನಂದರ ಸಂದೇಶಗಳು ತೀರ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಸ್ವಾಮೀಜಿ, ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್.ರೋಷನ್ ಬೇಗ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ, ಗದಗ ಮಠದ ನಿರ್ಭಯಾನಂದ ಸ್ವಾಮೀಜಿ, ಬೆಂವಿವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತಿತರರಿದ್ದರು.





