ಹೆಬ್ಬಾಳ ವಿಧಾನಸಭಾ ಉಪ ಚುನಾವಣೆ: ಆಕಾಂಕ್ಷಿಗಳ ನಡುವೆ ಪೆಪೋಟಿ
ಬೆಂಗಳೂರು, ಜ.19: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್ ಪಕ್ಷದ ಪ್ರಮುಖ ಆಕಾಂಕ್ಷಿಗಳಾದ ವಿಧಾನಪರಿಷತ್ ಸದಸ್ಯರಾದ ಭೈರತಿ ಸುರೇಶ್ ಹಾಗೂ ಎಚ್.ಎಂ.ರೇವಣ್ಣ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಮಂಗಳವಾರ ಬೆಳಗ್ಗೆ ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಎಚ್.ಎಂ. ರೇವಣ್ಣ ನಿವಾಸಕ್ಕೆ ಭೇಟಿ ನೀಡಿದ ಭೈರತಿ ಸುರೇಶ್, ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತನಗೆ ಒಂದು ಅವಕಾಶ ಮಾಡಿಕೊಡುವಂತೆ ರೇವಣ್ಣ ಮನವೊಲಿಸಲು ಯತ್ನಿಸಿದರು.
ಇದರಿಂದ ಕೆರಳಿದ ರೇವಣ್ಣ, ನಿನಗೆ ರಾಜಕೀಯವಾಗಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಆತುರ ಪಡಬೇಡ. ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೂ ನಿನಗೂ ಏನು ಸಂಬಂಧ. ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ ಎಂದು ಸುರೇಶ್‌ಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ರೇವಣ್ಣ ಮನವೊಲಿಕೆ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಭೈರತಿ ಸುರೇಶ್ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರು ಗಿದರು. ಅಲ್ಲದೆ, ರೇವಣ್ಣ ಭೇಟಿಗೆ ಸಂಬಂಧಿಸಿದಂತೆ ಮಾ ಧ್ಯಮಗಳಿಗೆ ಮಾಹಿತಿ ನೀಡಲು ಸುರೇಶ್ ನಿರಾಕರಿಸಿದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ:
ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಅಂತಿಮ ಕ್ಷಣದಲ್ಲಿ ಹೆಬ್ಬಾಳ ಕ್ಷೇತ್ರದ ಟಿಕೆಟ್ ಕೈತಪ್ಪಿತ್ತು. ಅದಕ್ಕೂ ಹಿಂದಿನ ಚುನಾವಣೆ ಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದೆ. ಅಂದಿನಿಂದ ಕ್ಷೇತ್ರದಲ್ಲಿ ಜನಪರವಾದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇನೆ ಎಂದು ರೇವಣ್ಣ ಹೇಳಿದರು.
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಭೈರತಿ ಸುರೇಶ್ ಹಾಗೂ ತಮ್ಮ ನಡುವೆ ಸೌಹಾರ್ದಯುತ ಭೇಟಿ ಇದಾಗಿತ್ತು. ಅವರಿಗೆ ತಿರುಪತಿ ಪ್ರಸಾದ ಹಾಗೂ ಕಾಫಿಯನ್ನು ನೀಡಿದೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ನಾನು ಭೈರತಿ ಸುರೇಶ್‌ರನ್ನು ತರಾಟೆಗೆ ತೆಗೆದುಕೊಂಡಿಲ್ಲ ಎಂದರು. ಹೆಬ್ಬಾಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಾನು ಸೇರಿದಂತೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಆದುದರಿಂದ, ನನ್ನನ್ನು ಟಿಕೆಟ್‌ಗೆ ಪರಿಗಣಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಭೈರತಿ ಸುರೇಶ್ ಪರ ಮುಖ್ಯಮಂತ್ರಿ
ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು, ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಬಿಬಿಎಂಪಿ ಹಾಗೂ ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸರಕಾರದ ಜೊತೆ ಭೈರತಿ ಸುರೇಶ್ ಇದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಖರ್ಗೆ ನಿವಾಸದಲ್ಲಿ ಇಂದು ಸಭೆ?
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಯ್ಕೆ ಸಂಬಂಧ ಉಂಟಾಗಿರುವ ಗೊಂದಲ ಬಗೆಹರಿಸಲು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಬೆಂಗಳೂರಿನ ನಿವಾಸದಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಅಹ್ಮದ್ ಸರಡಗಿಯನ್ನು ಅಡ್ಡ ಮತದಾನ ಮಾಡಿಸುವ ಮೂಲಕ ಸೋಲಿಸಿದ್ದ ಭೈರತಿ ಸುರೇಶ್‌ಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಎಚ್.ಎಂ.ರೇವಣ್ಣ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ ಎನ್ನಲಾಗಿದೆ.







