ದಲಿತ ವಿದ್ಯಾರ್ಥಿ ರೋಹಿತ್ ಸಾವು: ಭುಗಿಲೆದ್ದ ಪ್ರತಿಭಟನೆ

ಬೆಂಗಳೂರು, ಜ.19: ಸಂಘಪರಿವಾರದ ಷಡ್ಯಂತ್ರದಿಂದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವನ್ನಪ್ಪಿದ್ದು, ಇದಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಿ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಪುರಭವನದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದವು.
ಎಎಫ್‌ಐ, ಡಿವೈಎಫ್‌ಐ, ಬಿವಿಎಸ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪುರಭವನದ ಮುಂದೆ ಒಗ್ಗೂಡಿ ರೋಹಿತ್ ಸಾವಿಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಸಚಿವ, ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಹಾಗೂ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ನೇರ ಹೊಣೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಹುಜನ ವಿದ್ಯಾರ್ಥಿ ಸಂಘದ ರಾಜ್ಯ ಸಂಚಾಲಕ ಹರಿರಾಮ್ ಮಾತನಾಡಿ, ಉನ್ನತ ಶಿಕ್ಷಣ ದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬೆರಳೆಣಿಕೆಯ ದಲಿತ ವಿದ್ಯಾರ್ಥಿಗಳನ್ನು ನಿರ್ನಾಮ ಮಾಡಲು ಸಂಘ ಪರಿವಾರ ಷಡ್ಯಂತ್ರ ರೂಪಿಸಿದ್ದು, ಇದನ್ನು ತಡೆಗಟ್ಟಲು ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಬೇಕಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆಸುತ್ತಿರುವುದು ಮುಸ್ಲಿ ಮರಲ್ಲ, ಸಂಘಪರಿವಾರದವರು. ಪ್ರತಿನಿತ್ಯ ಜಾತಿ, ಲಿಂಗ, ಧರ್ಮದ ಹೆಸರಿನಲ್ಲಿ ಜನ ಸಾಮಾನ್ಯರನ್ನು ಸಂಘಪರಿವಾರದ ಕಾರ್ಯಕರ್ತರು ಹಿಂಸಿಸುತ್ತಿದ್ದಾರೆ. ಇನ್ನು ಮುಂದಾದರು ಕೋಮುವಾದಿಗಳ ದುಷ್ಕೃತ್ಯಗಳ ವಿರುದ್ಧ ದೇಶದ ಬಹು ಜನರು ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ದೇಶದ ಎಲ್ಲ ವಿಶ್ವವಿದ್ಯಾನಿಲಯಗಳು ಕೇಸರೀಕರಣಗೊಂಡಿದ್ದು, ದಲಿತ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸಲಾಗದ ಸ್ಥಿತಿಗೆ ಬಂದಿದೆ. ಕೋಮುವಾದಿಗಳು ನಡೆಸುವ ಅನ್ಯಾಯದ ವಿರುದ್ಧ ದಲಿತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಕೂಡಲೇ ಅವರನ್ನು ಹಿಂಸಿಸುವಂತಹ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾದಲ್ಲಿ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಸಂಘ ಪರಿವಾರ ತನ್ನ ಕೋಮುವಾದಿ ಬಣ್ಣವನ್ನು ಹಂತ ಹಂತವಾಗಿ ವ್ಯಕ್ತಪಡಿಸುತ್ತಿದೆ. ರೋಹಿತ್‌ನ ಸಾವನ್ನು ಒಂದು ಪಾಠವಾಗಿ ಅರಿತು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಒಗ್ಗೂಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ಪ್ರತಿಭಟನೆಯಲ್ಲಿ ಮಾನವ ಹಕ್ಕು ಹೋರಾಟಗಾರ ನಗರಿ ಬಾಬಯ್ಯ, ಪ್ರೊ.ಎನ್.ವಿ.ನರಸಿಂಹಯ್ಯ, ನಗರಗೆರೆ ರಮೇಶ್, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಚಿತ್ರ ನಿರ್ದೇಶಕ ಬಿ.ಸುರೇಶ್, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್, ದಲಿತ ಮುಖಂಡ ಬಿ. ಗೋಪಾಲ್, ಆಮ್‌ಆದ್ಮಿ ಮುಖಂಡ ರವಿಕೃಷ್ಣಾರೆಡ್ಡಿ, ಪತ್ರಕರ್ತ ಶಿವಸುಂದರ್, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ. ಅಂಬರೀಷ್, ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಂಘಪರಿವಾರ ತನ್ನ ಷಡ್ಯಂತ್ರದಿಂದ ಒಬ್ಬ ರೋಹಿತ್‌ನನ್ನು ಬಲಿ ಪಡೆದಿರಬಹುದು. ಆದರೆ, ಆತನ ಹೋರಾಟದ ಸ್ಫೂರ್ತಿಯಿಂದ ನೂರಾರು ರೋಹಿತ್‌ರು ಹುಟ್ಟಿಕೊಂಡಿದ್ದಾರೆ. ಕೋಮುವಾದಿಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ.
ಓಂಕಾರ್ ಸಂಶೋಧನಾ ವಿದ್ಯಾರ್ಥಿ, ರೋಹಿತ್‌ನ ಸ್ನೇಹಿತ







