ನಾವೂರು ಹರೀಶ್ ಪೂಜಾರಿ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬಂಟ್ವಾಳ, ಜ. 19: ನಾವೂರು ಹರೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ರವಿರಾಜ್ ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಅಹ್ಮದಾಬಾದ್‌ನಲ್ಲಿ ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ.12ರಂದು ಅಮಾಯಕ ಹರೀಶ್ ಪೂಜಾರಿಯನ್ನು ಕೊಲೆ ನಡೆಸಿದ ಆರೋಪಿಗಳ ಪೈಕಿ ಮೂವರನ್ನು ಕೆಲವು ದಿನಗಳ ಬಳಿಕ ಬಂಧಿಸಲಾಗಿತ್ತು. ಇನ್ನೋರ್ವ ಆರೋಪಿ ರವಿರಾಜ್ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಸಾರ್ವಜನಿಕರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಒತ್ತಾಯಗಳು ಕೇಳಿ ಬರುತ್ತಿತ್ತು. ಹಾಗಾಗಿ ಈತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಸೋಮವಾರ ಗುಜರಾತ್ ರಾಜ್ಯದ ಅಹ್ಮದಾಬಾದ್ ಜಿಲ್ಲೆಯ ವಸ್ತ್ರಾಪುರ ಎಂಬಲ್ಲಿ ಅತನ ಚಿಕ್ಕಪ್ಪ ರಮೇಶ್ ಎಂಬವರ ಮನೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಮತ್ತು ಎಎಸ್ಪಿ ರಾಹುಲ್ ಕುಮಾರ್ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಉಪ ನಿರೀಕ್ಷಕ ರಕ್ಷತ್ ಎ.ಕೆ., ಪಿ.ಸಿ. ಜಗದೀಶ ಮತ್ತು ರಾಜಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಏನಿದು ಪ್ರಕರಣ: ನ. 10ರಂದು ನಡೆದ ಟಿಪ್ಪು ಜಯಂತಿಯ ಬಳಿಕ ಅಹಿತಕರ ಘಟನೆ ಸೃಷ್ಟಿಯಾಗಿತ್ತು. ನ.12ರಂದು ಸಂಜೆ ಮೃತ ಹರೀಶ್ ಪೂಜಾರಿ ಹಾಗೂ ಆತನ ಗೆಳೆಯ ಸಮೀವುಲ್ಲ ಎಂಬಾತ ಜೊತೆಯಾಗಿ ಅಂಗಡಿಯೊಂದರಲ್ಲಿ ತಂಪು ಪಾನೀಯ ಕುಡಿದು ಮನೆಗೆ ತೆರಳಲು ಬೈಕ್ ಏರುತ್ತಿದ್ದಂತೆಯೇ ಬಿಳಿ ಓಮ್ನಿ ಕಾರಿನಲ್ಲಿ ಬಂದ ಬಜರಂಗದಳದ ಕಾರ್ಯಕರ್ತರು ಸಮೀವುಲ್ಲನ ಕೊಲೆಗೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ಸಮೀವುಲ್ಲನನ್ನು ಹಂತಕರಿಂದ ರಕ್ಷಿಸಲು ಯತ್ನಿಸಿದ ಹರೀಶ್ ಪೂಜಾರಿಯನ್ನು ಹಂತಕರು ಇರಿದು ಪರಾರಿಯಾಗಿದ್ದರು. ಇರಿತದಿಂದ ಗಂಭೀರ ಗಾಯಗೊಂಡ ಹರೀಶ್ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಭುವಿತ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಕೆಲವು ದಿನಗಳ ನಂತರ ೊಲೀಸರು ಬಂಧಿಸಿದ್ದರು.





