ರೋಹಿತ್ ಸಾವು ಪ್ರಕರಣ; ಮೋದಿ, ಸ್ಮತಿ, ಬಂಡಾರು ಪ್ರತಿಕೃತಿ ದಹನ

ಮಂಡ್ಯ, ಜ.19: ಹೈದರಾಬಾದ್ ಕೇಂದ್ರೀಯ ವಿಶ್ವ ವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯ ಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಂಜಯ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಹಾಗೂ ಸ್ಮತಿ ಇರಾನಿ ಅವರ ಪ್ರತಿಕೃತಿಗಳನ್ನು ದಹನ ಮಾಡಿ, ಬಂಡಾರು, ಸ್ಮತಿ ಇರಾನಿ ಅವರನ್ನು ಸಚಿವ ಸಂಪುಟದಿಂದ ವಜಾಮಾಡಬೇಕು. ಎಬಿವಿಪಿ ಸಂಘ ಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ ಮೂರ್ತಿ, ಸಿಐಟಿಯು ಮುಖಂಡರಾದ ಸಿ. ಕುಮಾರಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತಾಹೇರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ರಾಮಣ್ಣ, ಎಸ್‌ಡಿಪಿಐ ಮುಖಂಡ ದಾದಾಪೀರ್, ದಲಿತ ಮಾನವ ಹಕ್ಕುಗಳ ವೇದಿಕೆಯ ಬಸವರಾಜು, ಜನಪರ ಕ್ರಿಯಾ ವೇದಿಕೆಯ ಲಕ್ಷ್ಮಣ್ ಚೀರನಹಳ್ಳಿ, ಎಸ್‌ಎಫ್‌ಐ ಮುಖಂಡ ರಾಜೇಂದ್ರ, ಚಲನಚಿತ್ರ ನಿರ್ದೇಶಕ ಹನಕೆರೆ ಅಭಿಷೇಕ್‌ಗೌಡ ಮತ್ತಿತರರು ಪಾಲ್ಗೊಂಡಿದ್ದರು.





