‘ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ’
ಬೆಂಗಳೂರು, ಜ.19: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿಂದುಳಿದ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸೌಲಭ್ಯ ಕಲ್ಪಿಸಲು ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಲ್ಲದೆ ಇತರೆ ಕೋರ್ಸ್‌ಗಳಾದ ಡಿಪ್ಲೊಮಾ, ಐಟಿಐ, ನರ್ಸಿಂಗ್, ಬಿಎ, ಬಿಎಸ್ಸಿ, ಡಿ.ಇಡಿ, ಬಿ.ಎಡ್ ಮುಂತಾದ ಸಾಮಾನ್ಯ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗರಿಷ್ಠ 1 ಲಕ್ಷ ರೂ.ವರೆಗೆ ಶೇ.2ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಸಾಲವನ್ನು ವ್ಯಾಸಂಗ ಪೂರ್ಣಗೊಂಡ ತರುವಾಯ ಮೂರು ವರ್ಷಗಳ ಅವಧಿಯಲ್ಲಿ ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ವಯೋಮಿತಿಯಲ್ಲಿರಬೇಕು, ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರೂ.ಗಳ ಮಿತಿಯಲ್ಲಿರಬೇಕು ಹಾಗೂ ಅಲೆಮಾರಿ-ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿರಬೇಕು. ಯೋಜನೆಯ ಸೌಲಭ್ಯ ಪಡೆಯಲು ಇಚ್ಛಿಸುವವರು ನಿಗಮದ ಕಚೆೇರಿಯಲ್ಲಿ ಅರ್ಜಿಯನ್ನು ಉಚಿತವಾಗಿ ಪಡೆದು ಜ.30ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ www.karnataka.gov.in/dbcdc ಅಥವಾ ದೂರವಾಣಿ ಸಂಖ್ಯೆ: 080-23156007ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







