ಶೌಚಗುಂಡಿಯಲ್ಲಿ ಮೂವರ ಸಾವು

ಕೇರಳದ ಕಣ್ಣೂರಿನಲ್ಲಿ ನಡೆದ ಘಟನೆ
ಕಾಸರಗೋಡು, ಜ.19: ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಉಸಿರುಗಟ್ಟಿದ್ದ ಕಾರ್ಮಿಕನನ್ನು ರಕ್ಷಿಸಲು ಟ್ಯಾಂಕ್‌ಗಿಳಿದ ತಾಯಿ ಮತ್ತು ಮಗ ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ಇಂದು ಸಂಜೆ ಕಣ್ಣೂರಿನ ಚಕ್ಕರಕ್ಕಲ್‌ನಲ್ಲಿ ನಡೆದಿದೆ.
ಮೃತಪಟ್ಟವರನ್ನು ಚಕ್ಕರಕ್ಕಲ್ ಪಲ್ಲಿಪಾಯಲ್ನ ರಘುತ್ತೋಮರವರ ಪತ್ನಿ ಸತಿ ( 50) ಪುತ್ರ ರತೀಶ್ ( 28) ಮತ್ತು ಕಾರ್ಮಿಕ ಮುನೀರ್ ( 35) ಎಂದು ಗುರುತಿಸಲಾಗಿದೆ ಸತಿಯವರ ಮನೆಯ ಶೌಚಗುಂಡಿ ದುರಸ್ತಿಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಶೌಚಗುಂಡಿಗೆ ಇಳಿದ ಮುನೀರ್ ಉಸಿರುಗಟ್ಟಿ ಕುಸಿದು ಬಿದ್ದಿದ್ದು, ಇದನ್ನು ಕಂಡ ರತೀಶ್ ಇಳಿದಿದ್ದು, ಅವರೂ ಕುಸಿದು ಬಿದ್ದರು. ಗಾಬರಿಗೊಂಡ ಸತಿಯವರು ಕೆಳಗಿಳಿದಿದ್ದು, ವಿಷಗಾಳಿಯಿಂದ ಅವರು ಕೂಡಾ ಉಸಿರುಗಟ್ಟಿ ಕುಸಿದು ಬಿದ್ದರು ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಮೂವರನ್ನು ಮೇಲಕ್ಕೆತ್ತಿದರೂ ಜೀವ ಉಳಿಸಲಾಗಲಿಲ್ಲ. ಘಟನೆ ನಡೆಯುವ ಸಂದರ್ಭದಲ್ಲಿ ರಘುತ್ತಮ ಹೊರಗಡೆ ತೆರಳಿದ್ದರು. ಟ್ಯಾಂಕ್‌ನಲ್ಲಿ ವಿಷ ಗಾಳಿ ತುಂಬಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.





