ಕೆಂಜಾರು ಪೇರ ಗ್ರಾಮದಲ್ಲಿಅಕ್ರಮ ಮರಳುಗಾರಿಕೆ

ಮಂಗಳೂರು, ಜ.19: ಅಕ್ರಮ ಮರಳುಗಾರಿಕೆ, ಹೊರರಾಜ್ಯಗಳಿಗೆ ಮರಳು ಸಾಗಾಟ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಆದೇಶದ ಹೊರತಾಗಿಯೂ ಜಿಲ್ಲೆಯ ವಿವಿಧೆಡೆ ರಾತ್ರಿ ಹಗಲೆನ್ನದೆ ಅಕ್ರಮ ಮರಳುಗಾರಿಕೆ ಮುಂದುವರಿದಿದೆ. ಆ ಪ್ರದೇಶಗಳಲ್ಲಿ ವಾಸಿಸುತ್ತಿ ರುವ ಸ್ಥಳೀಯರ ಮೇಲೆ ದಬ್ಬಾಳಿಕೆ, ಗೂಂಡಾಗಿರಿ ಜೊತೆಗೆ ಪ್ರಾಣಾಪಾಯದ ಭೀತಿಯನ್ನೂ ತಂದೊಡ್ಡಿದೆ. ಇಂತಹ ಒಂದು ಅಪಾಯಕಾರಿ ಘಟನೆಯಿಂದ ಅದೃಷ್ಟವಶಾತ್ ಕುಟುಂಬದ ಮೂರು ಮಂದಿ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿರುವುದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಒಂದು ಕಿ.ಮೀ. ದೂರದ ಕೆಂಜಾರು 3ನೆ ವಾರ್ಡ್ ಪೇರ ಎಂಬಲ್ಲಿ ಸೋಮವಾರ ನಡೆದಿದೆ. ಕೆಂಜಾರು 3ನೆ ವಾರ್ಡ್‌ನ ಪೇರ ಎಂಬಲ್ಲಿನ ನಿವಾಸಿಗಳಿಗೆ ಮಳವೂರು ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಕಚ್ಚಾರಸ್ತೆಯು ಇಲ್ಲಿನ ಫಲ್ಗುಣಿ ನದಿಯ ತಟದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ನಿನ್ನೆ ಸಂಜೆಯ ವೇಳೆ ಈ ಕಚ್ಚಾ ರಸ್ತೆಯಲ್ಲಿ ಕುಟುಂಬ ವೊಂದರ ಮೂವರು ಸದಸ್ಯರು ಮಾರುತಿ ಕಾರಿನಲ್ಲಿ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿನ ಹೊಂಡ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕಾರುನದಿಗೆ ಬಿದ್ದಿದೆ. ಆ ಸಂದರ್ಭ ನದಿಯಲ್ಲಿ ನೀರಿನ ಪ್ರಮಾಣ ಅಷ್ಟಾಗಿ ಇಲ್ಲದ ಕಾರಣ, ಸ್ಥಳೀಯರ ನೆರವಿನಿಂದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಕ್ರಮ ಮರಳುಗಾರಿಕೆಯ ದಂಧೆ ಇಲ್ಲಿನ ನಿವಾಸಿಗಳನ್ನು ಮಾತ್ರ ಹೈರಾಣಾಗಿಸಿದೆ.ಲ್ಲಿನ ಫಲ್ಗುಣಿ ನದಿ ತೀರದಲ್ಲಿ ಕಳೆದ ಸುಮಾರು 13 ವರ್ಷಗಳಿಂದ ಮರಳುಗಾರಿಕೆ ನಡೆಯುತ್ತಿದ್ದು, ಇದೀಗ ಕಳೆದೆರಡು ವರ್ಷಗಳಿಂದ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಮುಂದುವರಿದಿದೆ. ರಾತ್ರಿಹಗಲೆನ್ನದೆ ಇಲ್ಲಿನ ನದಿಯಿಂದ ಮರಳು ಮೇಲೆತ್ತಿ, ಜೆಸಿಬಿಗಳ ಮೂಲಕ ಲಾರಿಗಳಿಗೆ ಲೋಡ್ ಮಾಡಿ 10 ಚಕ್ರಗಳ ಲಾರಿಗಳ ಮೂಲಕ ಮರಳು ಸಾಗಾಟ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ನದಿ ಅಗಲಗೊಳ್ಳುತ್ತಾ ಸಾಗುತ್ತಿದ್ದು, ಪೇರ ಗ್ರಾಮದ ನಿವಾಸಿಗಳು ಮಳೆಗಾಲದಲ್ಲಿ ಆತಂಕದಲ್ಲೇ ದಿನಕಳೆಯುವಂತಾಗಿದೆ. ಇತ್ತ ಮರಳುಗಾರಿಕೆಯಿಂದ ರಸ್ತೆಗಳು ಹದಗೆಟ್ಟಿದ್ದು, ಧೂಳಿನಿಂದ ಕೂಡಿದ ರಸ್ತೆಯಲ್ಲಿ ಸಾರ್ವಜನಿಕರು ಓಡಾ ಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೆ, ಮರಳುಗಾರಿಕೆಯ ಲಾರಿಗಳು ರಸ್ತ ಮಧ್ಯದಲ್ಲೇ ಮರಳು ತುಂಬಿಸುವ ಕಾರ್ಯ ನಡೆಸುವುದರಿಂದ ಇಲ್ಲಿ ದ್ವಿಚಕ್ರ ವಾಹನ, ರಿಕ್ಷಾಗಳಲ್ಲಿ ಓಡಾಡಲು ಸಾಧ್ಯವೇ ಇಲ್ಲದಂತಾಗಿದೆ. ಮಳವೂರಿನಿಂದ ಪೇರಾ ಗ್ರಾಮಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯಲು ಅಥವಾ ಇತರ ಯಾವುದೇ ಕಾರ್ಯಗಳಿಗೆ ರಿಕ್ಷಾದವರು ಬರಲು ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಪ್ರಶ್ನಿಸಿದರೆ ಗೂಂಡಾಗಿರಿ!
ಇಷ್ಟು ಮಾತ್ರವಲ್ಲದೆ, ಅಕ್ರಮ ಮರಳುಗಾರಿಕೆಯನ್ನು ಪ್ರಶ್ನಿಸುವ ಸ್ಥಳೀಯರ ಮೇಲೆ ಮರಳು ದಂಧೆ ನಡೆಸುವವರು ಗೂಂಡಾಗಿರಿಯನ್ನು ಪ್ರದರ್ಶಿಸಿ ಬೆದರಿಕೆ ಹಾಕುತ್ತಾರೆ ಎನ್ನುವುದು ಸ್ಥಳೀಯರ ಆಕ್ಷೇಪ. ಲ್ಲಾಧಿಕಾರಿ ಮರಳುಗಾರಿಕೆಯನ್ನು ನಿಷೇಧ ಮಾಡಿದ್ದರೂ ಇಲ್ಲಿ ರಾತ್ರಿ ಹಗಲು ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಇಂದು ಮುಂಜಾನೆ ಪ್ರಶ್ನಿಸಲು ಹೊರಟ ಸ್ಥಳೀಯರ ತಂಡವನ್ನು ಮರಳು ದಂಧೆಕೋರರು ಬೆದರಿಸಿದ್ದಾರೆ. ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದಿದ್ದಾರೆ. ‘‘ನಾವು ಸಂಬಂಧಪಟ್ಟ ಗಣಿ ಮತ್ತು ಪೊಲೀಸ್ ಇಲಾಖೆಗಳಿಗೆ ಮಾಮೂಲಿ ನೀಡುತ್ತೇವೆ ಎನ್ನುತ್ತಾರೆ’’. ಈಗಾಗಲೇ ನಮ್ಮ ಮನೆ ಬಾವಿಯಲ್ಲಿ ಉಪ್ಪು ನೀರು ಬರಲಾ ರಂಭಿಸಿದೆ. ಇವರು ಹೀಗೇ ಮರಳು ಗಾರಿಕೆ ಮುಂದುವರಿಸಿದರೆ ಮಳವೂರು ಸೇತುವೆಯೂ ಕುಸಿದುಬೀಳಬಹುದು’’ ಎಂದು ಸ್ಥಳೀಯರಾದ ಅಮೀರ್ ಹುಸೈನ್ ಎಂಬವರು ಆತಂಕ ವ್ಯಕ್ತಪಡಿಸುತ್ತಾರೆ. ಾವು ಈ ಬಗ್ಗೆ ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆ, ಮಳವೂರು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದೇವೆ. ಆದರೆ ಕ್ರಮಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಗೂ ಈ ಬಗ್ಗೆ ದೂರು ನೀಡಿದ್ದೇವೆ. ಇಲ್ಲಿ ಮರಳುಗಾರಿಕೆ ನಡೆಸುತ್ತಿರುವ ವ್ಯಕ್ತಿಯೊಬ್ಬರ ವಿರುದ್ಧ ಬಜ್ಪೆಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಸಾರ್ವಜನಿಕ ಬೆದರಿಕೆ ಒಡ್ಡಿದ ಬಗ್ಗೆ ಮುಚ್ಚಳಿಕೆ ಬರೆಸಲಾಗಿದೆ. ಮಾತ್ರವಲ್ಲದೆ ಮರಳುಗಾರಿಕೆ ನಡೆಸುವ ವ್ಯಕ್ತಿಯೊಬ್ಬರು ಅಕ್ರಮವಾಗಿ ರೆಸಾರ್ಟ್ ನಿರ್ಮಿಸುತ್ತಿದ್ದು, ಪಂಚಾಯತ್ ಸದಸ್ಯರೊಬ್ಬರು ಈ ಬಗ್ಗೆ ಆಕ್ಷೇಪ ಎತ್ತಿದ್ದಕ್ಕೆ ಆ ವ್ಯಕ್ತಿ ಬೆದರಿಕೆ ಹಾಕಿರುವ ಘಟನೆಯೂ ನಡೆದಿದೆ. ಈ ಬಗ್ಗೆಯೂ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ’’ ಎಂದವರು ಹೇಳುತ್ತಾರೆ. ನೆರವಿಗೆ ಬಾರದ ಅಧಿಕಾರಿಗಳು!
‘‘ಅಧಿಕಾರಿಗಳಿಗೆ ದೂರು ನೀಡಿದರೆ ದೂರು ನೀಡಿದವರ ಮಾಹಿತಿ ಮರಳುಗಾರಿಕೆ ನಡೆಸುವವರಿಗೆ ತಲುಪಿ ಅವರಿಂದ ಬೆದರಿಕೆ ಬರುತ್ತದೆ. ನಿಷೇಧವಿದ್ದರೂ ಮರಳುಗಾರಿಕೆ ನಡೆಯುತ್ತಿದೆ ಎಂದು ಗಣಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ, ವಾಹನದ ವ್ಯವಸ್ಥೆ ಇಲ್ಲ, ನೀವು ಗಾಡಿಯನ್ನು ನಿಲ್ಲಿಸಿ ನಾವು ಬರುತ್ತೇವೆ ಎನ್ನುತ್ತಾರೆ. ರಾತ್ರಿಹಗಲು ಈ ಮರಳುಗಾರರನ್ನು ಕಾದು ಕುಳಿತುಕೊಳ್ಳಲು ನಾವು ದುಡಿಯಬೇಡವೇ?. ಈ ಪ್ರದೇಶದಲ್ಲಿ ಎಲ್ಲಾ ಧರ್ಮದವರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ಆದರೆ ಅಕ್ರಮ ಮರಳುಗಾರಿಕೆ ಗುಂಪಿನಿಂದಾಗಿ ನಾವು ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ.’’ ಎಂದು ಸ್ಥಳೀಯರು ಹೇಳುತ್ತಾರೆ.
300 ವರ್ಷಗಳ ಇತಿಹಾಸದ ಮಸೀದಿ ಅಪಾಯದಲ್ಲಿ!
ಫಲ್ಗುಣಿ ನದಿಯ ತಟದಲ್ಲಿ 300 ವರ್ಷಗಳಿಗೂ ಅಧಿಕ ಇತಿಹಾಸವಿರುವ ಮುಹಿಯುದ್ದೀನ್ ಜುಮಾ ಮಸೀದಿ ಇದೆ. ಮಣ್ಣಿನಿಂದ ಕಟ್ಟಲ್ಪಟ್ಟಿರುವ ಈ ಮಸೀದಿಯ ಒಳ ಆವರಣ ಅತ್ಯಾಕರ್ಷಕವಾಗಿದೆ. ಆದರೆ ಮರಳುಗಾರಿಕೆಯಿಂದ ನದಿಯ ಪಾತ್ರ ಹಿರಿದಾಗುತ್ತಿರುವ ಹಿನ್ನೆಲೆಯಲ್ಲಿ ಮಸೀದಿ ಕಟ್ಟಡವೂ ಅಪಾಯದ ಅಂಚಿನಲ್ಲಿದೆ. ಮಸೀದಿಯ ದಕ್ಷಿಣ ಹಾಗೂ ಹಳೆಯ ಉತ್ತರ ಬದಿಯಲ್ಲಿ ನಿರ್ಮಿಸಿದ ಕಲ್ಲಿನ ಧರೆಯು ಈಗಾಗಲೇ ಕುಸಿದಿದ್ದು, ಮರುಳುಗಾರಿಕೆಗೆ ಮುಂದುವರಿದರೆ ರಸ್ತೆ ಸಂಪೂರ್ಣ ಕುಸಿದು ಮಸೀದಿಯೂ ನೀರು ಪಾಲಾಗಲಿದೆ. ಹೀಗಾದರೆ ಸ್ಥಳೀಯರು ನಗರದ ಜತೆ ಸಂಪರ್ಕ ಕಳೆದುಕೊಂಡು ದ್ವೀಪದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದು ಸ್ಥಳೀಯರ ಆತಂಕ.
ಅಕ್ರಮ ಮರಳುಗಾರಿಕೆ ನಿಲ್ಲದಿದ್ದರೆ ಬೀದಿಗಿಳಿದು ಹೋರಾಟ
‘‘ನಮಗೆ ಹಗಲು ಹೊತ್ತು ಧೂಳುಮಯ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಅದಲ್ಲದೆ ಲಾರಿಗಳ ಓಡಾಟದ ಕರ್ಕಶ ಶಬ್ದ, ಗೂಂಡಾಗಾರಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ನಮ್ಮನ್ನು ಕೇಳುವವರು ಇಲ್ಲ. ಈ ಅಕ್ರಮ ಮರಳುಗಾರರಿಗೆ ನಿಯಂತ್ರಣ ಹಾಕುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳೂ ವೌನ, ಸ್ಥಳೀಯ ಜನಪ್ರತಿನಿಧಿಗಳ್ಯಾರೂ ನಮ್ಮ ಅಳಲನ್ನು ಕೇಳುವುದಿಲ್ಲ. ಮುಂದೆ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುವುದೇ ನಮ್ಮ ಮುಂದಿನ ದಾರಿ’’ ಎಂದು ಸ್ಥಳೀಯರು ಹೇಳುತ್ತಾರೆ.







