ರೋಹಿತ್ ಸಾವಿನ ಹಿಂದೆ ಸಾವಿರಾರು ದಲಿತ ದೌರ್ಜನ್ಯಗಳು: ಫಣಿರಾಜ್
ಉಡುಪಿ, ಜ.19: ಹೈದರಾಬಾದ್‌ನ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಹಿಂದೆ ಸಾವಿರಾರು ದಲಿತ ದೌರ್ಜನ್ಯಗಳಿವೆ. ಇಂತಹ ಸಾವುಗಳು ಸಂಭವಿಸುತ್ತಿದ್ದರೂ ನಾವು ಕೈಕಟ್ಟಿ ನೋಡಬೇಕೇ ಎಂಬುದು ಪ್ರಶ್ನೆಯಾಗಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.
ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಎಸ್‌ಐಓ ಉಡುಪಿ ಜಿಲ್ಲಾ ಘಟಕ ಮಂಗಳವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಬಹುಜನ ವಿದ್ಯಾರ್ಥಿ ಸಂಘದ ದ.ಕ. ಜಿಲ್ಲಾ ಮುಖಂಡ ಸುರೇಶ್ ಪಿ.ಬಿ. ಮಾತನಾಡಿ, ದಲಿತರನ್ನು ನಾಯಿಗಳಿಗೆ ಹೋಲಿಕೆ ಮಾಡುವ ಹಾಗೂ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣರಾಗುವ ಕೇಂದ್ರ ಸಚಿವರ ವಿರುದ್ಧ ಮೋದಿ ಸರಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ದಲಿತರ ಬಗ್ಗೆ ಕೀಳು ಮಟ್ಟದ ಭಾವನೆ ಹೊಂದಿರುವ ಸಾಕಷ್ಟು ಮಂದಿ ಇದ್ದಾರೆ. ಇವರನ್ನು ಮೊದಲು ತೊಲಗಿಸಬೇಕು ಎಂದು ಒತ್ತಾಯಿಸಿದರು.
ದಲಿತ ಚಿಂತಕ ಜಯನ್ ಮಲ್ಪೆ, ಜಮಾಅತೆ ಇಸ್ಲಾಮೀ ಹಿಂದ್‌ನ ಇದ್ರೀಸ್ ಹೂಡೆ, ಹುಸೇನ್ ಕೋಡಿ ಬೆಂಗ್ರೆ, ಅನ್ಸಾರ್ ಅಹ್ಮದ್, ಎಸ್‌ಐಓ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ, ಕಾರ್ಯದರ್ಶಿ ಮುಹಮ್ಮದ್ ಶಾರುಕ್, ಬಿಲಾಲ್ ಅಸ್ಸಾದಿ, ಸಲಾವುದ್ದೀನ್, ಅಲ್ಫಾಝ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.







