ಪುತ್ತೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ

ಪುತ್ತೂರು, ಜ.19: ರಸ್ತೆ ಸುರಕ್ಷತೆ ಮತ್ತು ರಸ್ತೆ ವಿನ್ಯಾಸಗಳ ಬದಲಾವಣೆ ಹಾಗೂ ಅಪಘಾತ ವಲಯಗಳ ನಿವಾರಣೆ ಇತ್ಯಾದಿ ಕುರಿತು ಸರಕಾರ ಗಮನ ಹರಿಸದಿರುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಪ್ರಸ್ತುತ ದೇಶದಲ್ಲಿ ವಾರ್ಷಿಕ 4.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹೇಳಿದರು.
ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದ 27ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತಿಥಿ ಭಾಷಣ ಮಾಡಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಉದಯ ಶಂಕರ್ ಡಿ., ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸವಾರಿ, ಸೀಟ್ ಬೆಲ್ಟ್ ಧರಿಸದೆ ವಾಹನಗಳಲ್ಲಿ ಪ್ರಯಾಣ, ಪಾನಮತ್ತರಾಗಿ ವಾಹನ ಚಲಾವಣೆ, ವಾಹನ ಚಲಾವಣೆಯ ಸಂದರ್ಭದಲ್ಲಿ ಮೊಬೈಲ್ ಬಳಕೆ ಇತ್ಯಾದಿ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತವೆ ಎಂದು ನುಡಿದರು.
ಅಪಘಾತ ರಹಿತ ವಾಹನ ಚಾಲನೆ ಮಾಡಿದ ಕೆಎಸ್ಸಾರ್ಟಿಸಿ ಚಾಲಕ ಗೋಪಾಲ ಗೌಡ, ರಿಕ್ಷಾ ಚಾಲಕರಾದ ರಮೇಶ್ ಶೆಟ್ಟಿ, ಶ್ರೀಧರ ಗೌಡ ಮತ್ತು ಕೆ. ಶ್ರೀಧರ ಅವರನ್ನು ಸನ್ಮಾನಿಸಲಾಯಿತು. ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಏರ್ಪಡಿಸಲಾದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಚಾರ ನಿಯಮ ಸಂಜ್ಞೆಗಳಿರುವ ಬ್ಯಾನರ್ ಅನ್ನು ಅತಿಥಿಗಳು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿಸೋಜ ಸ್ವಾಗತಿಸಿದರು. ಕಚೇರಿ ಸಿಬ್ಬಂದಿ ಪುರುಷೋತ್ತಮ ವಂದಿಸಿದರು. ಕಚೇರಿ ಸಿಬ್ಬಂದಿ ಸೌಮ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.







