ಜಾತಿ ವಿಷಬೀಜ ಬಿತ್ತುವ ಎಬಿವಿಪಿಯನ್ನು ನಿಷೇಧಿಸಿ: ಜಯನ್ ಮಲ್ಪೆ

ಉಡುಪಿ, ಜ.19: ಹೈದರಾಬಾದ್ ವಿಶ್ವವಿದ್ಯಾ ನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಸಾವು ಪ್ರಕರಣವನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕವು ಮಂಗಳವಾರ ಉಡುಪಿಯ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮಾತನಾಡಿದ ದಲಿತ ಚಿಂತಕ ಜಯನ್ ಮಲ್ಪೆ, ಕೇಂದ್ರ ಸರಕಾರಕ್ಕೆ ದಲಿತರ ಬಗ್ಗೆ ಕಾಳಜಿ ಹಾಗೂ ನೈತಿಕತೆ ಇದ್ದಲ್ಲಿ ಕೂಡಲೇ ಕೇಂದ್ರ ಸಚಿವ ದತ್ತಾತ್ರೇಯ ಹಾಗೂ ವಿವಿ ಕುಲಪತಿ ಯನ್ನು ಬಂಧಿಸಬೇಕು. ವಿದ್ಯಾರ್ಥಿಗಳಲ್ಲಿ ಜಾತಿಯ ವಿಷಬೀಜ ಬಿತ್ತುವ ಅಪಾಯಕಾರಿ ಸಂಘಟನೆ ಎಬಿವಿಪಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ರೋಹಿತ್ ಸಾವು ಅಂಬೇಡ್ಕರ್ ಕಾಲ ದಿಂದಲೂ ನಡೆಯುತ್ತಿರುವ ದಲಿತ ದೌರ್ಜನ್ಯದ ಮುಂದುವರಿದ ಭಾಗವಾಗಿದೆ. ದಲಿತರಿಗೆ ಸಾಮಾಜಿಕ ನ್ಯಾಯವನ್ನು ನೀಡಲು ಈ ವ್ಯವಸ್ಥೆ ತಡೆಯೊಡ್ಡುತ್ತಿದೆ. ಅದಕ್ಕಾಗಿ ಹೋರಾಟ ನಡೆಸಿದವರ ಕತ್ತು ಹಿಸುಕಲಾಗುತ್ತಿದೆ ಎಂದು ಆರೋಪಿಸಿದರಲ್ಲದೆ, ಪರ್ಯಾಯ ದರ್ಬಾರ್‌ನಲ್ಲಿ ಈ ಸಾವಿನ ಬಗ್ಗೆ ಯಾವುದೇ ಉಲ್ಲೇಖ ಆಗಿಲ್ಲ. ಸ್ವಾಮೀಜಿಗಳಿಗೆ ದಲಿತರ ಮೇಲಿನ ಪ್ರೀತಿ ಕೇವಲ ಬಾಯಲ್ಲಿ ಮಾತ್ರ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಸಿಎಫ್‌ಐ ಜಿಲ್ಲಾಧ್ಯಕ್ಷ ಮುಹಮ್ಮದ್ ಶಫೀಕ್, ಪ್ರಮುಖರಾದ ಅಬೂಬಕರ್ ಸಿದ್ದೀಕ್, ರಿಹಾನ್ ಆದಿ ಉಡುಪಿ, ಆವೇಝ್, ಸಾಹಿಲ್ ಉಪಸ್ಥಿತರಿದ್ದರು.





