‘ದಯಾಮರಣಕ್ಕೆ ಅವಕಾಶ ಕಲ್ಪಿಸಿ’
ಉಡುಪಿ, ಜ.19: ‘ಬೈಕ್ ಅಪಘಾತದಲ್ಲಿ ಒಂದು ಕಣ್ಣು, ಒಂದು ಕಿವಿ ಕಳೆದುಕೊಂಡಿರುವ ನನಗೆ ಕುಟುಂಬವನ್ನು ಸಾಕಲು ಕಷ್ಟವಾಗುತ್ತಿದೆ. ಮಾಡದ ತಪ್ಪಿಗೆ ವಿಕಲಚೇತನನಾಗಿರುವ ನನಗೆ ಸರಕಾರಿ ಉದ್ಯೋಗ ಒದಗಿಸಬೇಕು, ಇಲ್ಲವೇ ರಾಷ್ಟ್ರಪತಿಗಳು ದಯಾಮರಣಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ವರ್ಡ್ಡಸೆ ಎಂ.ಜಿ.ಕಾಲನಿಯ ದೇವೇಂದ್ರ ಸುವರ್ಣ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರ ನ.8ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾನು ಇದೀಗ ಒಂದು ಕಣ್ಣು ಹಾಗೂ ಕಿವಿ ಯನ್ನು ಕಳೆದುಕೊಂಡು ಅಂಗವೈಕಲ್ಯಕ್ಕೆ ಒಳಗಾಗಿದ್ದೇನೆ. ಮೀನುಗಾರಿಕೆ ವೃತ್ತಿಯಲ್ಲಿದ್ದ ನನಗೆ ಬೇರೆ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದ ನನ್ನ ಪತ್ನಿ, ಇಬ್ಬರು ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದೆ ಎಂದರು.
ಶಾಶ್ವತ ವಿಕಲಚೇತನನಾಗಿರುವ ನನಗೆ ಸರಕಾರಿ ಉದ್ಯೋಗ ಒದಗಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇನೆ. ಆದರೆ ಇದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನನ್ನ ಜೀವನಾಧಾರಕ್ಕೆ ಸರಕಾರಿ ಉದ್ಯೋಗ ಒದಗಿಸಿ, ಇಲ್ಲವೇ ನಾನು ದಯಾ ಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ ಎಂದು ದೇವೇಂದ್ರ ಸುವರ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಕೋಟಿ ಪೂಜಾರಿ, ನಾರಾಯಣ ಬಲ್ಲಾಳ್, ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು.





